21 ನೇ ಶತಮಾನದಲ್ಲೂ ನಾವು ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ವಿಷಾಧನೀಯ: ಗೋ.ಮಧುಸೂದನ್

ಮೈಸೂರು,ಜು.2: ಈ ಶರೀರ ಒಂದಲ್ಲ ಒಂದು ದಿನ ಸುಡಲ್ಪಡುವುದು. ಆದ್ದರಿಂದ ನೀನು ಬದುಕಿರುವವರೆಗೂ ಸಂತೋಷದಿಂದ ಜೀವಿಸು. ನಿನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಚಾರ್ವಾಕರ ಮಾತು ಎಲ್ಲರಿಗೂ ದಾರಿದೀಪವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹೇಳಿದರು.
ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಸೋಮವಾರ ಚಾರ್ವಾಕ ನಾಟಕೋತ್ಸವ-2018 ರ ಅಂಗವಾಗಿ ಆಯೋಜಿಸಿದ್ದ ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ಕುರಿತ ವಿಚಾರ ಸಂಕಿರಣ ಮತ್ತು ಕಥಾ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ಚಾರ್ವಾಕ ಎಂದರೆ ಋಷಿ ಎಂದರ್ಥ. ಯಾರು ಈ ಪ್ರಪಂಚವನ್ನು ಉಳಿಸುವ ಯೋಚನೆ ಮಾಡುತ್ತಾನೋ ಅಂತಹವನನ್ನು ಋಷಿ ಎನ್ನುತ್ತೇವೆ. ಅಂತಹ ವ್ಯಕ್ತಿಗಳು ಹೇಳಿರುವ ನುಡಿ ಮುತ್ತುಗಳು ಇಂದಿಗೂ ಚಿರಸ್ಮರಣೀಯವಾಗಿದೆ ಎಂದು ಹೇಳಿದರು.
ನಾವು 21ನೇ ಶತಮಾನದಲ್ಲಿಯೂ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ವಿಷಾಧನೀಯ. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗೆ ಅನುಗುಣವಾಗಿ ನಾವು ಬದಲಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕತೆಯೊಂದಿಗೆ ವೈಚಾರಿಕ ಜೀವನವನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಚ್ಚನ್ಯಾಯಾಲಯದ ನ್ಯಾಯವಾದಿ ಎಚ್.ಮೋಹನ್ ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಗತಿಪರ ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಮಲ್ಕುಂಡಿ ಮಹದೇವಸ್ವಾಮಿ ಪಾಲ್ಗೊಂಡಿದ್ದರು. ಚಾರ್ವಾಕ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾಚಳ್ಳಿ ಉಪಸ್ಥಿತರಿದ್ದರು.







