ದನ ಕಳವು ಪ್ರಕರಣ: ಆರೋಪಿ ವಶಕ್ಕೆ
ಮಂಗಳೂರು, ಜು.2: ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಮಾರುತಿ ಓಮ್ನಿಯಲ್ಲಿ ದನಕರುಗಳನ್ನು ಅಕ್ರಮಮವಾಗಿ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ರೌಡಿ ನಿಗ್ರಹ ದಳ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ವಶಕ್ಕೆ ಪಡೆದ ಆರೋಪಿಯನ್ನು ಮಲ್ಲೂರು ಗ್ರಾಮದ ಉದ್ದಬೆಟ್ಟು ನಿವಾಸಿ ಮುಸ್ತಫಾ ಯಾನೆ ಮುಸ್ತ(20) ಎಂದು ಗುರುತಿಸಲಾಗಿದ್ದು, ಆರೋಪಿಗಳಾದ ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟುವಿನ ನಿಜಾಮುದ್ದೀನ್, ಮಲ್ಲೂರಿನ ಫೌಝಾನ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: 2017ರ ನ.18ರಂದು ಮಲ್ಲೂರು ಪಲ್ಲಿಬೆಟ್ಟು ಮಸೀದಿ ಬಳಿ ದನಕರುಗಳ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಕಾರಿನಲ್ಲಿ ಸಾಗಿಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಓಮ್ನಿಯಲ್ಲಿ ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಝಾಮುದ್ದೀನ್, ಮುಸ್ತಫಾ ಹಾಗೂ ಮಲ್ಲೂರಿನ ಫೌಝಾನ ಎಂಬವರು ದನ ಸಾಗಾಟ ಮಾಡಿ, ಗದ್ದೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಆರೋಪಿ ಮುಸ್ತಫಾ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2 ಜಾನುವಾರು ಕಳವು ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಉಪವಿಭಾಗ ದಕ್ಷಿಣ ಎಸಿಪಿ ನೇತೃತ್ವದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





