ಉಡುಪಿ: ಸಕ್ರೀಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನಕ್ಕೆ ಚಾಲನೆ

ಉಡುಪಿ, ಜು.2:ಸಕ್ರೀಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನ ದ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಸೋಮವಾರ ನಿಟ್ಟೂರಿನ ವಿಷ್ಣುಮೂರ್ತಿ ನಗರ ಅಂಗನವಾಡಿ ಕೇಂದ್ರದಲ್ಲಿ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಚಾಲನೆ ನೀಡಿದರು.
ಕ್ಷಯ ರೋಗದ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಕರೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳನಿ ಪ್ರದೀಪ್ ರಾವ್, ಉಡುಪಿ ನಗರಸಬೆ ಸದಸ್ಯೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕರಪತ್ರ ಹಾಗೂ ಮಾಹಿತಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲೆಯಲ್ಲಿ 452 ಹೈ-ರಿಸ್ಕ್ ಹಾಗೂ ದುರ್ಬಲ ವರ್ಗದ ಗುಂಪುಗಳನ್ನು ಗುರುತಿಸಲಾಗಿದ್ದು, ಕ್ಷಯರೋಗ ಲಕ್ಷಣವಿದ್ದಲ್ಲಿ, ಕಫ ಪರೀಕ್ಷೆ, ಕ್ಷ-ಕಿರಣ ಪರೀಕ್ಷೆ ಹಾಗೂ ಸಿಬಿನಾಟ್ ಪರೀಕ್ಷೆಗೆ ಒಳಪಡಿಸಲಾಗುವುದು. ಇದಕ್ಕಾಗಿ 1,48,761 ಮಂದಿಯನ್ನು ಇದಕ್ಕಾಗಿ ಮನೆಮನೆಗೆ ತೆರಳಿ ಜನರ ಕ್ಷಯರೋಗದ ಲಕ್ಷಣಗಳಿಗೆ ಪರೀಕ್ಷಿಸಲಾಗುವುದು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ ವಂದಿಸಿದರು. ಜಿಲ್ಲಾ ಖಾಸಗಿ ಹಾಗೂ ಸರಕಾರಿ ಸಂಯೋಜಕ ಸುರೇಶ ಕೆ. ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು







