ಗುರುವಾಯನಕೆರೆ: ಜ್ವರದಿಂದ ವಿದ್ಯಾರ್ಥಿ ಮೃತ್ಯು
ಬೆಳ್ತಂಗಡಿ, ಜು. 2: ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಯೋರ್ವ ಜ್ವರ ಉಲ್ಬಣಗೊಂಡು ಮೃತಪಟ್ಟ ಘಟನೆ ರವಿವಾರ ತಡರಾತ್ರಿ ಗುರುವಾಯನಕೆರೆ ಸಮೀಪ ನಡೆದಿದೆ.
ಗುರುವಾಯನಕೆರೆ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿ ಇಮ್ರಾನ್ ಸಿ (13) ಮೃತಪಟ್ಟ ವಿದ್ಯಾರ್ಥಿ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇಮ್ರಾನ್‌ಗೆ ಚಿಕಿತ್ಸೆಯಿಂದ ಜ್ವರ ನಿಯಂತ್ರಣಕ್ಕೆ ಬಂದಿತ್ತು. ಆದರೆ ಆತನಿಗೆ ಅಪಸ್ಮಾರ ಖಾಯಿಲೆಯೂ ಇತ್ತು ಎನ್ನಲಾಗಿದ್ದು, ಜ್ವರ ಹಾಗೂ ಅಪಸ್ಮಾರದಿಂದ ಈತ ಮೃತಪಟ್ಟಿರಬೇಕು ಎಂದು ಅಂದಾಜಿಸಲಾಗಿದೆ. ರಾತ್ರಿಯೇ ಈತನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಇಮ್ರಾನ್ ತನ್ನ ತಾಯಿಯ ಜತೆ ಆತನ ಮಾವ ಗುರುವಾಯನಕೆರೆ ನಿವಾಸಿ ಇಬ್ರಾಹಿಂ ಅವರ ಮನೆಯಲ್ಲಿದ್ದುಕೊಂಡು ಗುರುವಾಯನಕೆರೆ ಪ್ರೌಢ ಶಾಲೆಗೆ ಹೋಗುತ್ತಿದ್ದ. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಮೃತ ವಿದ್ಯಾರ್ಥಿಯ ಗೌರವಾರ್ಥ ಗುರುವಾಯನಕೆರೆ ಶಾಲೆಗೆ ಸೋಮವಾರ ರಜೆ ನೀಡಲಾಗಿತ್ತು.





