ಸುಷ್ಮಾ ವಿರುದ್ಧದ ಟ್ರೋಲ್ ಗಳ ಬಗ್ಗೆ ಬಿಜೆಪಿಯಿಂದ ಮೊದಲ ಪ್ರತಿಕ್ರಿಯೆ ನೀಡಿದ ರಾಜನಾಥ್ ಸಿಂಗ್
ಪಾಸ್‌ಪೋರ್ಟ್ ವಿವಾದ

ಹೊಸದಿಲ್ಲಿ, ಜು.2: ಅಂತರ್‌ಧರ್ಮೀಯ ದಂಪತಿಯ ಪಾಸ್‌ಪೋರ್ಟ್ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರನ್ನು ಟ್ವಿಟರ್‌ನಲ್ಲಿ ಟ್ರಾಲ್ ಮಾಡಿರುವುದು ಸರಿಯಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಿಜೆಪಿ ಪಾಳಯದಿಂದ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ. “ನನ್ನ ಪ್ರಕಾರ ಅದು ತಪ್ಪು” ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್ ತಿಳಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಟೀಕೆ ಮಾಡಿ ಆದರೆ ಕೆಟ್ಟ ಭಾಷೆಯನ್ನು ಬಳಸಬೇಡಿ. ಉತ್ತಮ ಭಾಷೆಯಲ್ಲಿ ಟೀಕಿಸಿದರೆ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ” ಎಂದು ಸ್ವರಾಜ್ ರವಿವಾರ ಟ್ವೀಟ್ ಮಾಡಿದ್ದರು.
ಲಕ್ನೊದ ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರಾರನ್ನು ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ ಸ್ವರಾಜ್ ವಿರುದ್ಧ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಮಗೆ ಬಂದ ಕೆಲವೊಂದು ಕೀಳುಮಟ್ಟದ ಟ್ವೀಟ್‌ಗಳನ್ನು ಸ್ವರಾಜ್ ಮರು ಟ್ವೀಟ್ ಮಾಡಿದ್ದರು. ಪಾಸ್‌ಪೋರ್ಟ್ ಕಚೇರಿಗೆ ತೆರಳಿದ್ದ ದಂಪತಿಯ ಮೇಲೆ ಮಿಶ್ರಾ ಬೈಗುಳಗಳನ್ನು ಹರಿಸಿದ್ದರು. ಪತಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೂಚಿಸಿದ ಅವರು ಪತ್ನಿ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿರುವ ಕಾರಣಕ್ಕೆ ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ದಂಪತಿ ತನ್ನ ದೂರಿನಲ್ಲಿ ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ, ಪತ್ನಿಯ ನಿಖಾಹ್‌ನಾಮಾದಲ್ಲಿ ಆಕೆಯ ಹೆಸರು ಶಾಝಿಯಾ ಅನಸ್ ಎಂದು ತಿಳಿಸಲಾಗಿದ್ದು ಅದೇ ಹೆಸರು ಆಕೆ ನೀಡಿರುವ ದಾಖಲೆಗಳಲ್ಲೂ ಇರಬೇಕು ಎಂದು ಸೂಚಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.







