ಉಡುಪಿ: ಜಿಲ್ಲೆಯ ಭೂಪರಿವರ್ತನೆ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹ
ಉಡುಪಿ, ಜು.2: ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಭೂ ಪರಿವರ್ತನೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಚುನಾವಣೆ ನೆಪದಲ್ಲಿ ನೀತಿ ಸಂಹಿತೆ ಯ ನೆಪದಲ್ಲಿ ಭೂಪರಿವರ್ತನೆಯ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಯಿತು. ಇದೀಗ ರಾಜ್ಯಾದ್ಯಾಂತ ಏಕರೂಪದ ಭೂ ಪರಿವರ್ತನೆ ಸಾಫ್ಟ್‌ವೇರ್ ಅಳವಡಿಸಿರುವುದರಿಂದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಭೂ ನ್ಯಾಯ ಮಂಡಳಿ ಮಂಜೂರಾತಿ ಆಸ್ತಿಗಳನ್ನು ಭೂಪರಿವರ್ತನೆಗೆ ಅರ್ಜಿಗಳನ್ನು ಅಪ್ ಲೋಡ್ ಮಾಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಮೂಲಿ ಹಕ್ಕಿನ ಸ್ಥಿರಾಸ್ಥಿಗಳನ್ನು ಭೂಪರಿವರ್ತನೆಗೊಳಿಸಲು ಯಾವುದೇ ನಿರ್ದಿಷ್ಟ ಕ್ರಮಗಳು ಇಲ್ಲದೇ ಇರುವುದರಿಂದ ಮೂಲಿ ಹಕ್ಕಿನ ಸ್ಥಿರಾಸ್ಥಿಗಳಿಗೆ ಸಂಬಂಧಪಟ್ಟ ಭೂ ಪರಿವರ್ತನೆ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ ವಾಸ್ತವ್ಯದ ಮನೆ ನಿರ್ಮಾಣ ಮಾಡುವವರು, ಹೊಸ ಉದ್ದಿಮೆಗಳನ್ನು ಆರಂಭಿಸುವವರು ಇದರಿಂದ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿಕೆಯಲ್ಲಿ ದಸಂಸ ಹೇಳಿದೆ.
ಹೊಸ ನಿಯಮಾವಳಿ ಪ್ರಕಾರ ಅರ್ಜಿಗಳನ್ನು ಅಪ್ ಲೋಡ್ ಮಾಡಿ ನಂತರ ಅರ್ಜಿಗಳು ಬೇರೆ ಬೇರೆ ಪ್ರಾಧಿಕಾರಗಳಿಗೆ ಚಲಾವಣೆಗೊಂಡು ನಂತರ ಗ್ರಾಮ ಲೆಕ್ಕಿಗರವರದಿಯೊಂದಿಗೆ ಪುನಃ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಬೇಕಾಗಿದೆ. ಹೀಗೆ ಅನಾವಶ್ಯಕವಾಗಿ ಸುತ್ತುಬಳಸಿ ಮಾರ್ಗದಲ್ಲಿ ಭೂಪರಿವರ್ತನೆ ಪ್ರಕ್ರಿಯೆ ಅಳವಡಿಸಿರುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡ ಬೇಕಾಗಿದೆ ಹಾಗೂ ಅನಗತ್ಯ ಖರ್ಚು-ವೆಚ್ಚಗಳಿೆ ಕಾರಣವಾಗಿದೆ ಎಂದು ಅದು ದೂರಿದೆ.
ಆದುದರಿಂದ ಈ ಹಿಂದೆ ಇದ್ದ ಏಕಗವಾಕ್ಷಿ ಮಾದರಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಆರಂಭ ಮಾಡಬೇಕು. ಈ ಹಿಂದಿನಂತೆಯೇ ಮೂಲಿ ಹಕ್ಕಿನ ಸ್ಥಿರಾಸ್ಥಿಗಳಿಗೆ ಭೂ ಪರಿವರ್ತನೆಗೊಳಿಸಲು ಆಯಾಯ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕ ವಾಸುದೇವ ಮುದೂರು, ರಾಜು ಬೆಟ್ಟಿನಮನೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.







