ನಾಗಮಂಗಲ: ಡಯಾಲಿಸಿಸ್ ಒಳಗಾದ ರೋಗಿ ಸಾವು; ಗ್ರಾಮಸ್ಥರಿಂದ ಆಸ್ಪತ್ರೆಗೆ ಮುತ್ತಿಗೆ

ನಾಗಮಂಗಲ, ಜು.2: ಡಯಾಲಿಸಿಸ್‍ಗೆ ಒಳಗಾದ ವ್ಯಕ್ತಿಯೋರ್ವ ದಿಢೀರ್ ಬೆಳವಣಿಗೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಶನಿವಾರ ನಡೆದಿದ್ದು, ಘಟನೆಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಸೋಮವಾರ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬೆಟ್ಟದ ಮಲ್ಲೇನಹಳ್ಳಿ ಗ್ರಾಮದ ಗಿರಿಗೌಡ (48) ಎಂಬುವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದ ಅವರು ಶನಿವಾರ ಸಂಜೆ ಪಟ್ಟಣದ ಜನರಲ್ ಆಸ್ಪತ್ರಗೆ ಡಯಾಲಿಸಸ್‍ಗೆ ದಾಖಲಾಗಿದ್ದಾರೆ. ಡಾ.ವಸಂತಲಕ್ಷ್ಮಿ ವ್ಯಕ್ತಿಗೆ ಡಯಾಲಿಸಿಸ್ ಚಿಕಿತ್ಸೆ ನಡೆಸಿದ್ದು, ನಂತರ ವ್ಯಕ್ತಿಗೆ ಉಸಿರಾಟ ತೊಂದರೆಯಾಗಿ ಒಡ್ಡಾಡುತ್ತಾ ಡಯಾಲಿಸ್ ಕೇಂದ್ರದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಭಾನುವಾರ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು ಈತನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸೋಮವಾರ ಜನರಲ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವೆಂಕಟೇಶ್ ಕೊಠಡಿಗೆ ಮುತ್ತಿಗೆ ಹಾಕಿ ತರಾಟೆಗೆದುಕೊಂಡರು.
ಸಾವನ್ನಪ್ಪಿರುವ ಗಿರಿಗೌಡಗೆ ಡಯಾಲಿಸಿಸ್ ಕೇಂದ್ರದಲ್ಲಿ ಆಕ್ಸಿಜನ್ ಹಾಕಿರಲಿಲ್ಲ, ಇದರಿಂದಲೇ ಆತ ಉಸಿರುಗಟ್ಟಿ ವಿಲವಿಲ ಒದ್ದಾಡಿ ಮೃತಪಟ್ಟಿದ್ದಾನೆ. ಈ ಸಾವಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳೇ ಕಾರಣರಾಗಿದ್ದಾರೆ. ಸದರಿ ವೈದ್ಯರನ್ನು ಸ್ಥಳಕ್ಕೆ ಕರೆಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು, ಸ್ಥಳಕ್ಕೆ ಬಂದ ಡಾ.ವಸಂತಲಕ್ಷ್ಮಿಗೆ ಡಯಾಲಿಸಿಸ್‍ಗೆ ಸರಿಯಾದ ವ್ಯವಸ್ಥೆ ಇರದಿದ್ದರೆ, ಅಥವಾ ನಿಮ್ಮ ಕೈಯಲ್ಲಿ ಚಿಕಿತ್ಸೆ ನೀಡಲಾಗದಿದ್ದರೆ ಬೇರೊಂದು ಆಸ್ಪತ್ರೆಗೆ ಕಳುಹಿಸಬೇಕಿತ್ತು. ಈ ರೀತಿ ವ್ಯಕ್ತಿಗಳ ಪ್ರಾಣ ಕಳೆಯಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಡಯಾಲಿಸ್‍ಗೆ ಗುತ್ತಿಗೆ ಪಡೆದಿರುವ ಬಿಎಸ್‍ಆರ್ ಕಂಪನಿ ಮತ್ತು ವೈದ್ಯರ ವಿರುದ್ದ ಕ್ರಮವಹಿಸುವಂತೆ ಆಡಳಿತಾಧಿಕಾರಿಗೆ ಲಿಖಿತ ದೂರು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೆಟ್ಟದ ಮಲ್ಲೇನಹಳ್ಳಿ ಬಾಲಾಜಿ, ಚಿಕ್ಕವೀರನಕೊಪ್ಪಲು ಮುದ್ದೇಗೌಡ, ನಾಗೇಶ್, ದೇವರಾಜು, ಮಂಜುನಾಥ್, ಈರೇಗೌಡ ಮುಂತಾದವರು ಹಾಜರಿದ್ದರು.
ನುರಿತ ವೈದ್ಯರಿಲ್ಲ, ನಮ್ಮಿಂದ ಲೋಪವಾಗಿಲ್ಲ; ವೈದ್ಯರ ಸಮರ್ಥನೆ
ಘಟನೆ ಬಗ್ಗೆ ಮಾತನಾಡಿದ ಆಡಳಿತಾಧಿಕಾರಿ ಡಾ.ವೆಂಕಟೇಶ್ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸ್ಟಾಫ್ ನರ್ಸ್‍ಗಳ ಕೊರತೆ ಇದೆ. ಅರವಳಿಕೆ ತಜ್ಞರಿಲ್ಲ, ಡಯಾಲಿಸಿಸ್‍ಗೆಂದು ನುರಿತ ವೈದ್ಯರೂ ಇಲ್ಲ. ಎಲ್ಲವನ್ನೂ ಆ ದಿನದ ಡ್ಯೂಟಿ ಡಾಕ್ಟರ್ ಗಳೇ ನೋಡಿಕೊಳ್ಳಬೇಕಿದೆ. ಅಲ್ಲದೆ ಡಯಾಲಿಸಿಸ್‍ಗೆ ಗುತ್ತಿಗೆ ಪಡೆದಿರುವ ಕಂಪನಿಯಿಂದಲೂ ನಮಗೆ ಸರಿಯಾಗಿ ಸ್ಪಂದನೆ ಇಲ್ಲ. ನೀವು ಆರೋಪಿಸುತ್ತಿರುವಂತೆ ನಮ್ಮಿಂದ ಯಾವುದೇ ಲೋಪವಾಗಿಲ್ಲ. ಒಮ್ಮೆ ಪರಿಸ್ಥಿತಿ ಬಿಗಡಾಯಿಸಿದಾಗ ಇಂತಹ ಘಟನೆ ಸಂಭವಿಸಬಹುದು ಎಂದು ಸಮರ್ಥಸಿಕೊಂಡರು.
ಡಾ.ವಸಂತಲಕ್ಷ್ಮಿಯವರೂ ಕೂಡ ನಾವು ವ್ಯಕ್ತಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಯೇ ಕ್ರಮವಹಿಸಲಾಗಿತ್ತು. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿಕೊಂಡರು. ಈ ಸಂಬಂದ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಲ್ಲಿ ಚರ್ಚಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಆಡಳಿತಾದಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.







