ಹನೂರು: ಕಸ ಕಡ್ಡಿ, ಪ್ಲಾಸ್ಟಿಕ್ ನಿಂದಲೇ ತುಂಬಿದ ಚರಂಡಿ; ತ್ಯಾಜ್ಯ ತೆರವಿಗೆ ಗ್ರಾಮಸ್ಥರ ಆಗ್ರಹ

ಹನೂರು: ಹನೂರು ಸಮೀಪದ ಬಂಡಳ್ಳಿ ಗ್ರಾಮದ ನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಮನೆ ಮುಂದೆ ನಿರ್ಮಿಸಿರುವ ಚರಂಡಿಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ತಾಜ್ಯ ಮತ್ತು ಕಲುಷಿತ ನೀರು ತುಂಬಿ ಅನೈರ್ಮಲ್ಯ ಉಂಟಾಗಿದೆ.
ಗ್ರಾಮದ ಮುಸ್ಲಿಂ ಬೀದಿಯ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯದೆ, ಪಾಚಿಕಟ್ಟಿ ಗಬ್ಬುವಾಸನೆ ಬೀರುತ್ತಿದೆ. ಮನೆಗಳಿಂದ ಬಂದ ಕೊಳಚೆ ನೀರು ಚರಂಡಿಗಳಲ್ಲಿ ಸಂಗ್ರಹವಾಗಿ ಸೊಳ್ಳೆಗಳ ಕಾಟ ಮೀರಿದೆ ಮತ್ತು ನೀರು ಸಹ ಬೇರೆ ಕಡೆ ಹರಿಯದೆ ಒಂದೇ ಕಡೆ ಸಂಗ್ರಹವಾಗಿರುವುದರಿಂದ ಇಲ್ಲಿಯ ನಿವಾಸಿಗಳು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಚರಂಡಿಯ ತುಂಬೆಲ್ಲಾ ನೀರು ನಿಂತಿರುವುದರಿಂದ ತಮ್ಮ ಮನೆಗಳ ಒಳಗಡೆ ಹೋಗಲು ತೊಂದರೆ ಆಗುತ್ತಿದ್ದು, ತೆರವಿಗೆ ಮುಂದಾಗಿ ಎಂದು ಸ್ಥಳೀಯ ಪ್ರಜ್ಞಾಯಂತ ಯುವಕರು ಇಲ್ಲಿನ ಅವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದಿದ್ದರೂ ಸಹ ಇದರ ನಿರ್ವಹಣೆಗೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಚರಂಡಿಯ ತ್ಯಾಜ್ಯ ತೆರವಿಗೆ ಮುಂದಾಗಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.







