ಶಾಲೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳನ್ನು ಹೆಚ್ಚು ಒಳಗೊಳಿಸಲು ಎನ್‌ಸಿಆರ್‌ಟಿಯಿಂದ ಹೊಸ ಕೈಪಿಡಿ ರಚನೆ
ಹೊಸದಿಲ್ಲಿ, ಜು. 2: ಎನ್‌ಸಿಆರ್‌ಟಿಇ ರೂಪಿಸಿದ ಕೈಪಿಡಿಯಲ್ಲಿ ಶಾಲೆಯ ಸಭೆ ಸೇರುವ ಸಂದರ್ಭದ ಪ್ರಾರ್ಥನೆ ಹಾಗೂ ಗೋಡೆಯಲ್ಲಿ ಕಾಣುವ ದೇವರು, ದೇವತೆಗಳ ಚಿತ್ರಗಳು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಪರಕೀಯವಾಗಿದ್ದು, ಕೆಲವೊಂದು ಬದಲಾವಣೆಗಳನ್ನು ತರುವ ಸಲಹೆ ನೀಡಲಾಗಿದೆ.
ಇದು ಶಾಲೆಯಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಉತ್ಸವಗಳ ಆಚರಣೆ, ಶಾಲೆಯಲ್ಲಿ ಧಾರ್ಮಿಕ ಸಮಾರಂಭಗಳ ಆಚರಣೆಯ ಸಂದರ್ಭ ಈ ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ನಿರ್ವಹಿಸುವುದು ಹಾಗೂ ಶಾಲಾ ಆಡಳಿತ ಮಂಡಳಿ ಸಮಿತಿ (ಎಸ್‌ಎಂಸಿ)ಯಲ್ಲಿ ಅಲ್ಪಸಂಖ್ಯಾತ ಮಕ್ಕಳ ಪೋಷಕರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಕೂಡ ಒಳಗೊಂಡಿದೆ.
ಎಸ್‌ಎಂಸಿಗಾಗಿ ಸಿದ್ದಪಡಿಸಲಾದ ಈ ಕೈಪಿಡಿಯಲ್ಲಿ ಅಸಮಾನತೆ ಹಾಗೂ ಕಿರುಕುಳದಂತಹ ಕೆಲವು ಸಾಮಾನ್ಯ ವಿಷಯಗಳನ್ನು ಹೊರತುಪಡಿಸಿ ಆಹಾರ ಅಭ್ಯಾಸದ ಬಗ್ಗೆ ಮನನೋಯಿಸುವ ಹೇಳಿಕೆ ಹಾಗೂ ಅನಪೇಕ್ಷಿತ ಸಮವಸ್ತ್ರದ ಗ್ರಹಿಕೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ. ಎನ್‌ಸಿಈಆರ್‌ಟಿ ಎಸ್‌ಎಂಸಿಗಾಗಿ ಜೂನ್‌ನಲ್ಲಿ ಈ ಕೈಪಿಡಿ ಬಿಡುಗಡೆ ಮಾಡಿದೆ. ಇದನ್ನು ಆರ್‌ಟಿಇ ಕಾಯ್ದೆ ಪ್ರಕಾರ ರೂಪಿಸಲಾಗಿದೆ. ದೇಶದ ಆದ್ಯತಾ ಪಟ್ಟಿಯಲ್ಲಿ ಇರುವ ಸಾಮಾಜಿಕ ಅನನುಕೂಲ ಗುಂಪುಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಸಬಲೀಕರಣದ ಬಗ್ಗೆ ಈ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನಡೆಯಿದ ಈ ಸಮುದಾಯಗಳು ಸಮಾಜದ ಇತರ ಸಮುದಾಯಕ್ಕಿಂತ ಹಿಂದುಳಿದಿದೆ ಎಂದು ಕೈಪಿಡಿ ಹೇಳಿದೆ.







