ವನ್ಯಜೀವಿ ಭೇಟೆಯಾಡುತ್ತಿದ್ದ ಆರೋಪಿಗಳ ಬಂಧನ: ಲಕ್ಷಾಂತರ ರೂ. ಮೌಲ್ಯದ ಪ್ರಾಣಿಗಳ ಉಗುರು, ಆನೆದಂತ ವಶಕ್ಕೆ
ಚಿಕ್ಕಮಗಳೂರು, ಜು.2: ಜಿಲ್ಲೆಯ ಭದ್ರಾ ಹುಲಿ ಅಭಯಾರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ವನ್ಯಜೀವಿಗಳನ್ನು ಭೇಟೆಯಾಡಿ ಅವುಗಳ ಉಗುರು, ಕೊಂಬು, ಮೂಳೆ, ಚರ್ಮಗಳನ್ನು ವಿದೇಶಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲ ಬೇಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಭೇಟೆಗಾರರನ್ನು ಶಿವಮೊಗ್ಗ ಮೂಲದ ಸತೀಶ್, ರಾಜಕಣ್ಣಾ ಅಲಿಯಾಸ್ ಸೇಟು, ಸಂತೋಷ್, ಕಣ್ಣಪ್ಪನ್ ಹಾಗೂ ತರೀಕೆರೆ ತಾಲೂಕಿನ ಉಪ್ಪಾರ ಬಸವನಹಳ್ಳಿ ಗ್ರಾಮದ ರವಿ ಮತ್ತು ಆತನ ಸಹೋದರ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಈ ಕಳ್ಳ ಭೇಟೆಗಾರರ ತಂಡದ ಉಳಿದ ಸದಸ್ಯರಿಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ. ಆನೆ ದಂತಗಳು, ಚಿಪ್ಪು ಹಂದಿಯ ಚಿಪ್ಪುಗಳು, ಜಿಂಕೆ, ಕಾಡುಕೋಣಗಳ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ: ವನ್ಯ ಜೀವಿಗಳನ್ನು ಭೇಟೆಯಾಡಿ ಅವುಗಳ ಮೂಳೆ, ದಂತ, ಉಗುರು, ಕೊಂಬುಗಳನ್ನು ವಿದೇಶಗಳಿಗೆ ಮಾರಾಟ ಮಾಡುವ ಜಾಲದ ಬಗ್ಗೆ ಜಿಲ್ಲೆಯ ಭದ್ರಾ ಹುಲಿ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಲಯಯದ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಬೆನ್ನತ್ತಿದ ಭದ್ರಾ ಹುಲಿ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಮಾರು ವೇಷದಲ್ಲಿ ಆರೋಪಿಗಳ ಬಳಿಗೆ ಹೋಗಿದ್ದರು. ಈ ವೇಳೆ ಆನೆ ದಂತಗಳನ್ನು ಕೊಂಡುಕೊಳ್ಳುವುದಾಗಿ ಮಾರು ವೇಶದಲ್ಲಿದ್ದ ಅರಣ್ಯ ಸಿಬ್ಬಂದಿ ಆರೋಪಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ನಂತರ ಆರೋಪಿಗಳನ್ನು ನಿರ್ದಿಷ್ಟ ಜಾಗದಲ್ಲಿ ಭೇಟಿಯಾಗಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಭದ್ರಾ ಮೀಸಲು ಅಭಯಾರಣ್ಯ ಸೇರಿದಂತೆ ಮಲೆನಾಡಿನ ಪ್ರಮುಖ ಕಾಡುಗಳಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡುಕೋಣ, ಚಿಪ್ಪುಹಂದಿ ಮತ್ತಿತರ ಅಮೂಲ್ಯ ವನ್ಯ ಜೀವಿಗಳನ್ನು ಭೇಟೆಯಾಡಿ ನಂತರ ಅವುಗಳ ದೇಹದ ಬೆಲೆಬಾಳುವ ಮೂಳೆಗಳು, ಉಗುರು, ಆನೆದಂತ, ಕೊಂಬು, ಚಿಪ್ಪುಗಳನ್ನು ಭಾರೀ ಬೆಲೆಗೆ ಮಧ್ಯವರ್ತಿಗಳ ಮೂಲಕ ವಿದೇಶಗಳಿಗೂ ಮಾರಾಟ ಮಾಡುತ್ತಿದ್ದ ಮಾಹಿತಿಯನ್ನು ಹೊರಹಾಕಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಬಂಧನಕ್ಕೊಳಗಾಗಿರುವ ಕಳ್ಳಬೇಟೆಗಾರ ತಂಡದ ಜಾಲ ದೊಡ್ಡದಿದ್ದು, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಜಾಲದ ಎಲ್ಲ ಆರೋಪಿಗಳ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ. ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ಮೂವರು ಶಿವಮೊಗ್ಗ ಮೂಲದವರು. ಉಳಿದ ಮೂವರು ತರೀಕೆರೆ ತಾಲೂಕಿನವರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಮಾರು ವೇಶದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ತಂಡದಲ್ಲಿ ಇನ್ನೂ ಕೆಲ ಸದಸ್ಯರಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸೋಮವಾರದಿಂದಲೇ ಉಳಿದ ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದೇವೆ. ಬಂಧಿತರಿಂದ ಹದಿನಾರುವರೆ ಕೆಜಿ ಜಿಂಕೆ, ಕಾಡುಕೋಣಗಳ ಕೊಂಬು, 4 ಕೆಜಿ ಮುಳ್ಳು ಹಂದಿಯ ಚಿಪ್ಪು ಹಾಗೂ 11 ಕೆಜಿ ಆನೆ ದಂತ ವಶಕ್ಕೆ ಪಡೆದಿದ್ದೇವೆ.
- ಕಾಂತರಾಜ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾ ಹುಲಿ ಅಭಯಾರಣ್ಯ