ವ್ಯಾಪಾರದಲ್ಲಿ ಐರೋಪ್ಯ ಒಕ್ಕೂಟವು ಚೀನಾದಷ್ಟೇ ಕೆಟ್ಟದು: ಟ್ರಂಪ್

ವಾಶಿಂಗ್ಟನ್, ಜು. 2: ಐರೋಪ್ಯ ಒಕ್ಕೂಟವು ವ್ಯಾಪಾರದಲ್ಲಿ ಚೀನಾದಷ್ಟೇ ಕೆಟ್ಟದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘‘ಅವರು ಮರ್ಸಿಡಿಸ್‌ನ್ನು ಕಳುಹಿಸುತ್ತಾರೆ. ನಮ್ಮ ಕಾರುಗಳನ್ನು ನಾವು ಕಳುಹಿಸುವಂತಿಲ್ಲ. ನಮ್ಮ ರೈತರಿಗೆ ಅವರು ಏನು ಮಾಡುತ್ತಿದ್ದಾರೆ ನೋಡಿ. ಅವರಿಗೆ ನಮ್ಮ ಹೈನು ಉತ್ಪನ್ನಗಳು ಬೇಡ. ಈಗ ಅವರಿಗೆ ಅವರ ರೈತರು ಇದ್ದಾರೆ. ಆದರೆ, ನಾವು ನಮ್ಮ ರೈತರನ್ನು ರಕ್ಷಿಸುವುದಿಲ್ಲ, ಆದರೆ ಅವರು ಅವರ ರೈತರನ್ನು ರಕ್ಷಿಸುತ್ತಾರೆ’’ ಎಂದು ‘ಫಾಕ್ಸ್ ನ್ಯೂಸ್’ನ ‘ಸಂಡೇ ಮಾರ್ನಿಂಗ್ ಫ್ಯೂಚರ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಹೇಳಿದರು.
ಅಮೆರಿಕದ ಬಾರ್‌ಬಾನ್, ಜೀನ್ಸ್ ಮತ್ತು ಮೋಟರ್‌ಸೈಕಲ್ ಮುಂತಾದ ಪ್ರಮುಖ ಉತ್ಪನ್ನಗಳ ಆಮದಿನ ಮೇಲೆ ಐರೋಪ್ಯ ಒಕ್ಕೂಟವು ಕಳೆದವಾರ ಪ್ರತೀಕಾರಾತ್ಮಕ ತೆರಿಗೆಗಳನ್ನು ವಿಧಿಸಿದ ಬಳಿಕ, ಐರೋಪ್ಯ ಒಕ್ಕೂಟದಿಂದ ಆಮದು ಮಾಡು ಕಾರುಗಳ ಮೇಲೆ ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಯುರೋಪ್, ಕೆನಡ ಮತ್ತು ಮೆಕ್ಸಿಕೊಗಳಿಂದ ಆಮದು ಮಾಡುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಜೂನ್ 1ರಂದು ಅಮೆರಿಕ ವಿಧಿಸಿದ ತೆರಿಗೆಗಳಿಗೆ ಪ್ರತಿಯಾಗಿ ಐರೋಪ್ಯ ಒಕ್ಕೂಟ ಕಳೆದ ವಾರ ಅಮೆರಿಕದ ವಸ್ತುಗಳಿಗೆ ಆಮದು ತೆರಿಗೆಯನ್ನು ವಿಧಿಸಿತ್ತು.







