ಮೂಡಿಗೆರೆ: ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ; ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

ಮೂಡಿಗೆರೆ,ಜು.02 : ಪಟ್ಟಣದ ಕೆಎಂ ರಸ್ತೆಯ ನಾಲ್ಕೈದು ಅಂಗಡಿಗಳಿಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದು ಮುಂಜಾನೆ ಬೆಳಕಿಗೆ ಬಂದಿದೆ.
ಶನಿವಾರ ಮಧ್ಯರಾತ್ರಿ ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಪ್ರಮುಖ ಮಧ್ಯ ಮಾರಾಟದ ಅಂಗಡಿಗಳಾದ ಮಂಚೇಗೌಡರ ಮಾಲೀಕತ್ವದ ಚಂದನ್ ವೈನ್ಸ್, ಕೇಶವ ಸುವರ್ಣ ಅವರ ಸುದರ್ಶನ್ ವೈನ್ಸ್, ಹಾಸನದ ನಾರಾಯಣಗೌಡರ ಗೌಡಯ್ಯ ಕಂಪನಿಯ ಎಸ್‍ಬಿಜಿ ಬಾರ್, ಉಮರ್ ಎಂಬುವವರ ಶಿಫಾ ಮೆಡಿಕಲ್ಸ್, ಅಲ್ಲದೇ ಪಟ್ಟಣದ ಹೊರವಲಯದ ಬಿಳಗುಳದ ಎ.ಸಿ.ಆಸಿಫ್ ಎಂಬವರ ಹಾರ್ಡ್‍ವೇರ್ ಮೊದಲಾದ ಪ್ರಮುಖ ಅಂಗಡಿಗಳಿಗೆ ರೋಲಿಂಗ್ ಶೆಟ್ಟರ್ ಮುರಿದು ಕಳ್ಳರು ಒಳನುಗ್ಗಿ ನಗದು ಹಣಕ್ಕಾಗಿ ಜಾಲಾಡಿರುವುದು ಬೆಳಕಿಗೆ ಬಂದಿದೆ.
ಕಳ್ಳರು ತಡರಾತ್ರಿ 1 ರಿಂದ 2 ಗಂಟೆಯ ಒಳಗೆ ಈ ಎಲ್ಲಾ ಅಂಗಡಿಗಳಿಗೂ ನುಗ್ಗಿರುವುದು ಸಿಸಿ ಟಿವಿಯ ದೃಶ್ಯಾವಳಿಯಿಂದ ಪತ್ತೆಯಾಗಿದೆ. 4 ಮಂದಿ ಯುವಕರು ಮಾರುತಿ ಶಿಫ್ಟ್ ಡಿಸೈರ್ ಕಾರೊಂದರಲ್ಲಿ ಬಂದು ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ. ಸುಮಾರು ಐವತ್ತು ಸಾವಿರದ್ದಷ್ಟು ಚಿಲ್ಲರೆ ಹಣ ದೋಚಿದ್ದಾರೆ. ಈ ಎಲ್ಲ ಪ್ರಕರಣಗಳಿಗೂ ಕಳ್ಳರು ಕೆ.ಎಂ.ರಸ್ತೆಯ ವೈನ್‍ಶಾಪ್ ಮತ್ತಿತರೆ ಅಂಗಡಿಗಳನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
ಮೂಡಿಗೆರೆ ಪೋಲೀಸರು ಪ್ರಕರಣ ದಾಖಲಿಸಿದ್ದು, ಸಿಸಿ.ಟಿವಿಯಲ್ಲಿದ್ದ ಸಂಪೂರ್ಣ ದೃಶ್ಯಾವಳಿಗಳನ್ನು ವೀಕ್ಷಿಸಿದ್ದು, ಕಳ್ಳರ ಪತ್ತೆಗೆ ಇದು ಬಹಳ ಪ್ರಯೋಜನವಾಗಲಿದೆ ಎಂದು ತಿಳಿಸಿದರು. ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್, ಠಾಣಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕೆ.ಎಂ.ರಸ್ತೆಯ ಶಿಫಾ ಮೆಡಿಕಲ್ ಸೇರಿದಂತೆ 3 ಅಂಗಡಿಗಳಿಗೆ ಇದೇ ರೀತಿ ರೋಲಿಂಗ್ ಶೆಟರ್ ಮುರಿದು ಕಳ್ಳರು ನುಗ್ಗಿ ಚಿಲ್ಲರೆ ಹಣ ದೋಚಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅದೇ ರೀತಿಯ ಕಳ್ಳತನ ಕೃತ್ಯ ನಡೆದಿದೆ. ಪಟ್ಟಣದಾದ್ಯಂತ ರಾತ್ರಿವೇಳೆ ಅನುಮಾನಾಸ್ಪದವಾಗಿ ತಿರುಗಾಡುವವರ ಮೇಲೆ ಇತ್ತೀಚೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಇಂತಹ ಕಳ್ಳತನ ಕೃತ್ಯ ನಡೆಯಲು ಸಹಕಾರಿಯಾದಂತಾಗಿದೆ. ಇಂತಹ ಸರಣಿ ಕಳ್ಳತನ ಕೃತ್ಯದಿಂದಾಗಿ ಪಟ್ಟಣದಾದ್ಯಂತ ಭಯದ ವಾತಾವರಣ ಮೂಡಿದ್ದು, ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.







