ತಮಿಳುನಾಡಿಗೆ ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರು ಹರಿಸಿ
ಕರ್ನಾಟಕಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ

ಹೊಸದಿಲ್ಲಿ, ಜು.2: ಸುಪ್ರೀಂ ಕೋರ್ಟ್ ಆದೇಶದಂತೆ ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದೆ.
ಕೇಂದ್ರ ಜಲ ಮಂಡಳಿ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೈನ್ ಅವರ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರೂಪಿಸಿರುವುದರ ವಿರುದ್ಧ ಕರ್ನಾಟಕ ಸರಕಾರ ಜೂನ್ 30ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಹೊರತಾಗಿಯೂ ಮಸೂದ್ ಹುಸೈನ್, ಸಭೆ ಸಹಕಾರ ಹಾಗೂ ಸೌಹಾರ್ದದಿಂದ ನಡೆಯಿತು ಎಂದಿದ್ದಾರೆ.
ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಪುದುಚೇರಿಯ ಪ್ರತಿನಿಧಿಗಳು ಸಭೆಯಲ್ಲಿ ಹಾಜರಾಗಿದ್ದರು. ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಜುಲೈ ತಿಂಗಳಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿತು.
ನಿಯಂತ್ರಣ ಸಮಿತಿಯ ಮೌಲ್ಯಮಾಪನ ಹಾಗೂ ಶಿಫಾರಸಿಗೆ ಅನುಗುಣವಾಗಿ ಜುಲೈಯಲ್ಲಿ ಬಾಕಿ ನೀರಿನ ಪ್ರಮಾಣದ ಸಮತೋಲನ ಖಾತರಿಪಡಿಸಬೇಕು, ಜೂನ್‌ನಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ನೀಡಿದ್ದರೆ, ಅದನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಕಾವೇರಿಯಿಂದ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸಲಾಗಿದೆ. ತಮಿಳುನಾಡಿನಿಂದ ಪುದುಚೇರಿಗೆ ನೀರು ಬಿಡುಗಡೆ ಮಾಡುವ ಈಗ ಇರುವ ವ್ಯವಸ್ಥೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.







