ಕರ್ನಾಟಕದ ಎಲ್ಲಾ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ: ಸಚಿವ ದೇಶಪಾಂಡೆ
ಬೆಂಗಳೂರು, ಜು. 3: ಮಾನಸ ಸರೋವರ ಯಾತ್ರೆಗೆ ತೆರಳಿರುವ ಕರ್ನಾಟಕದ ಎಲ್ಲ ಯಾತ್ರಾರ್ಥಿಗಳು ಇದುವರೆಗೆ ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಭಾರೀ ಮಳೆಯಿಂದಾಗಿ ರಾಜ್ಯದ ಯಾತ್ರಾರ್ಥಿಗಳಿಗೆ ತೊಂದರೆಯಾಗಿದ್ದು ನಿಜ. ಯಾತ್ರೆಗೆ ತೆರಳಿದ್ದ 525 ಯಾತ್ರಾರ್ಥಿಗಳ ಪೈಕಿ ನಮ್ಮ ರಾಜ್ಯದ 250 ಯಾತ್ರಾರ್ಥಿಗಳಿದ್ದು, ಅವರ ಸುರಕ್ಷತೆಗೆ ರಾಜ್ಯ ಸರಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣೆಗೆ ಧಾವಿಸುವಂತೆ ಕೇಂದ್ರದ ಗೃಹ ಇಲಾಖೆ, ವಿದೇಶಾಂಗ ವ್ಯವಹಾರಗಳ ಇಲಾಖೆಗೂ ಮನವಿ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಊಟ-ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆಗೆ ಮಳೆ ಅಡ್ಡಿಯಾಗಿದೆ ಎಂದು ತಿಳಿಸಿದರು.
ನೇಪಾಳದಲ್ಲಿರುವ ಭಾರತೀಯ ರಾಯಭಾರಿಗೆ ಯಾತ್ರಾರ್ಥಿಗಳು ಧಾವಿಸುವಂತೆ ಸೂಚಿಸಲಾಗಿದೆ. ಜತೆಗೆ ನೇಪಾಳದ ಸೇನಾ ಹೆಲಿಕಾಪ್ಟರ್ ಮೂಲಕ ಅನಾರೋಗ್ಯಕ್ಕೊಳಗಾದವರು, ಹಿರಿಯ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಪ್ರಯತ್ನ ಮಾಡುವಂತೆ ಅಲ್ಲಿರುವ ನಮ್ಮ ರಾಯಭಾರಿಗೆ ಕೋರಲಾಗಿದೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊಸದಿಲ್ಲಿಯಲ್ಲಿರುವ ಸ್ಥಾನಿಕ ಆಯುಕ್ತರಿಗೆ ಯಾತ್ರಾರ್ಥಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದ ಅವರು, ಕಂದಾಯ ಇಲಾಖೆ ಪ್ರಕೃತಿ ವಿಕೋಪ ಕಾರ್ಯದರ್ಶಿಗೂ ಯಾತ್ರಾರ್ಥಿಗಳ ರಕ್ಷಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದರು.