ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕ: ಆರೋಪ

ಭೋಪಾಲ್, ಜು.3: ಬಿಜೆಪಿ ಯುವ ಮೋರ್ಚಾ ನಾಯಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿ, ಆಕೆಯ ಹೊಟ್ಟೆಗೆ ತುಳಿದು ಹಾಡಹಗಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಭೋಪಾಲದಿಂದ 275 ಕಿ.ಮೀ. ದೂರದಲ್ಲಿರುವ ಟಿಕಾಮ್ ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ತಮ್ಮ ವಾಹನ ಬಾಲಕಿಯೊಬ್ಬಳಿಗೆ ಢಿಕ್ಕಿ ಹೊಡೆದ ನಂತರ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ಆದರೆ ಪೊಲೀಸ್ ಅಧಿಕಾರಿ ಅವರನ್ನು ಹಿಡಿದಿದ್ದು, ಈ ಸಂದರ್ಭ ವಾಹನದಲ್ಲಿದ್ದ ಬಿಜೆಪಿ ನಾಯಕ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು newindianexpress.com ವರದಿ ಮಾಡಿದೆ.
ಇಲ್ಲಿನ ಲಿಧೋರಾದಲ್ಲಿ ಮಹಿಳಾ ಅಧಿಕಾರಿ ಹೆಚ್ಚು ಲೋಡ್ ಇದ್ದ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಬಾಲಕಿಯೊಬ್ಬಳಿಗೆ ಢಿಕ್ಕಿ ಹೊಡೆದಿದ್ದರು.
"ಕೂಡಲೇ ಸ್ಥಳದಿಂದ ಕಾಲ್ಕಿತ್ತ ಇಬ್ಬರನ್ನೂ ಪೊಲೀಸ್ ಅಧಿಕಾರಿ ಹಿಡಿದರು. ಡ್ರೈವಿಂಗ್ ಲೈಸೆನ್ಸ್ ತೋರಿಸುವಂತೆ ಅವರು ಹೇಳಿದಾಗ, ಹಿಂಬದಿ ಸವಾರ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ" ಎಂದು ಟಿಕಾಮ್ ಗರ್ ಪೊಲೀಸ್ ಸುಪರಿಂಟೆಂಡೆಂಟ್ ಕುಮಾರ್ ಪ್ರತೀಕ್ ಮಾಹಿತಿ ನೀಡಿರುವುದಾಗಿ newindianexpress.com ವರದಿ ಮಾಡಿದೆ.
ಸಾರ್ವಜನಿಕರು ನೋಡುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ನಾಯಕ ಮುನೇಂದ್ರ ಸಿಂಗ್ ಮಹಿಳಾ ಅಧಿಕಾರಿಯ ಕಾಲರ್ ಪಟ್ಟಿ ಹಿಡಿದು, ಕೆನ್ನೆಗೆ ಹೊಡೆದು, ಹೊಟ್ಟೆಗೆ ತುಳಿದಿದ್ದಾನೆ ಹಾಗು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿದೆ.







