ದೇಶಾದ್ಯಂತದ ಗುಂಪು ಹಿಂಸೆಗಳಿಗೆ ಮೋದಿ ಸರಕಾರ ನೀರೆರೆಯುತ್ತಿದೆ: ಕಾಂಗ್ರೆಸ್

ಹೊಸದಿಲ್ಲಿ, ಜು. ೩: ದೇಶಾದ್ಯಂತ ಥಳಿಸಿ ಹತ್ಯೆ ನಡೆಸುತ್ತಿರುವ ಘಟನೆಗಳಿಗೆ ಮೋದಿ ಸರಕಾರದ ‘ನೆರವು ಹಾಗೂ ಕುಮ್ಮಕ್ಕು’ ಕಾರಣ ಎಂದು ಸೋಮವಾರ ಆರೋಪಿಸಿರುವ ಕಾಂಗ್ರೆಸ್, ‘ಅರಾಜಕತೆ’, ‘ಗುಂಪು ಉದ್ವಿಗ್ನತೆ’ ಹಾಗೂ ‘ಜಂಗಲ್ ರಾಜ್’ ನರೇಂದ್ರ ಮೋದಿ ಅವರ ನೂತನ ಭಾರತದ ಹೊಸ ಸಂಕೇತಗಳು ಎಂದಿದೆ.
ಕಳೆದ ಒಂದು ತಿಂಗಳಲ್ಲಿ ದಿನಕ್ಕೆ ಒಂದರಂತೆ ೨೮ ಜನರನ್ನು ಥಳಿಸಿ ಹತ್ಯೆ ನಡೆಸಿದ ಪ್ರಕರಣಗಳು ನಡೆದಿವೆ. ಭಾರತಕ್ಕೆ ಸ್ವಾಂತತ್ರ್ಯ ಸಿಕ್ಕಿದ ಬಳಿಕ ಹಿಂದೆಂದೂ ಇಷ್ಟೊಂದು ಘಟನೆಗಳು ನಡೆದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಶೇಕ್ ಸಿಂಘ್ವಿ ಹೇಳಿದ್ದಾರೆ.
ವದಂತಿ ಹರಡುವಿಕೆ, ಹತ್ಯೆ ನಡೆಸಲು ರಾಜ್ಯದ ನೆರವು ಹಾಗೂ ಕಾನೂನಿನ ಬೆಂಬಲ ‘ಥಳಿಸಿ ಹತ್ಯೆ ಚಳವಳಿ’ಗೆ ಕಾರಣವಾಗಿದೆ. ಇದು ನಮ್ಮ ದೇಶದ ಆತ್ಮ ಸಾಕ್ಷಿಯನ್ನು ಕಲಕಿದೆ ಎಂದು ಅವರು ಹೇಳಿದ್ದಾರೆ.
ಹರಡುತ್ತಿರುವ ಗುಂಪು ಉದ್ವಿಗ್ನತೆ, ಥಳಿಸಿ ಹತ್ಯೆ ನಡೆಸುತ್ತಿರುವ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಇದು ಬಿಜೆಪಿ ಸರಕಾರಕ್ಕೆ ಸಕಾಲ. ನಕಲಿ ಗೋರಕ್ಷಕರ ವಿರುದ್ಧ ನಾಗರಿಕರು ತಿರುಗಿ ಬೀಳುವ ಮುನ್ನ ಬಿಜೆಪಿ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಅವರು ಹೇಳಿದ್ದಾರೆ.







