ಸುನಂದಾ ಸಾವು ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿದ ಥರೂರ್

ಹೊಸದಿಲ್ಲಿ, ಜು.3: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಶಶಿ ಥರೂರ್ ನಿರೀಕ್ಷಣಾ ಜಾಮೀನು ಕೋರಿ ದಿಲ್ಲಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದ ಹಾಗೂ ಆಕೆಯೊಡನೆ ಕ್ರೂರವಾಗಿ ವರ್ತಿಸಿರುವ ಆರೋಪವನ್ನು ಥರೂರ್ ಮೇಲೆ ಹೊರಿಸಲಾಗಿದ್ದು ಅವರ ವಿರುದ್ಧ ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ತನ್ನನ್ನು ಬಂಧಿಸದೆಯೇ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ದಾಖಲಿಸಲಾಗಿದೆ. ಅಲ್ಲದೆ ವಿಚಾರಣೆ ಮುಕ್ತಾಯವಾಗಿದ್ದು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಎಸ್‌ಐಟಿ(ವಿಶೇಷ ತನಿಖಾ ತಂಡ) ಸ್ಪಷ್ಟವಾಗಿ ತಿಳಿಸಿದೆ. ಬಂಧಿಸದೆ ಆರೋಪಪಟ್ಟಿ ದಾಖಲಿಸಿದರೆ ಆಗ ಜಾಮೀನು ನೀಡುವುದು ಅನಿವಾರ್ಯವಾಗಿದೆ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈಗ ನಮಗೆ ರಕ್ಷಣೆ ನೀಡಬೇಕು. ನಾವು ಜುಲೈ 7ರಂದು ನ್ಯಾಯಾಲಯದ ಎದುರು ಹಾಜರಾಗುತ್ತೇವೆ ಎಂದು ಥರೂರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದ ವಿಶೇಷ ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರ(ಜು.4ಕ್ಕೆ) ಮುಂದೂಡಿದರು.





