1058 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು, ಜು.3: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 3695 ಕೆರೆಗಳಿದ್ದು, ಈ ಪೈಕಿ 2501 ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ನಿಯಮ 72ರಡಿಯಲ್ಲಿ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 1058 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ತೆರವುಗೊಳಿಸಲಾಗಿರುವ ಪ್ರದೇಶದ ವಿಸ್ತೀರ್ಣ 5383.54 ಹೆಕ್ಟೇರ್ ಗಳಾಗಿರುತ್ತದೆ ಎಂದು ಹೇಳಿದರು.
92 ಕೆರೆಗಳಲ್ಲಿ ಒತ್ತುವರಿಯಾಗಿರುವ 393.42 ಹೆಕ್ಟೇರ್ ಪ್ರದೇಶವನ್ನು ಇನ್ನೂ ತೆರವುಗೊಳಿಸಬೇಕಾಗಿದೆ. ಸರ್ವೆ ಕಾರ್ಯ ಕೈಗೊಂಡಿರುವ 1927 ಕೆರೆಗಳಿಗೆ ಬೌಂಡ್ರಿ ಟ್ರೆಂಚ್ ನಿರ್ಮಿಸಲಾಗಿದೆ. ಹಾಗೂ 88 ಕೆರೆಗಳಿಗೆ ಚೈನ್ ಲಿಂಕ್ ಫೆನ್ಸ್ ಅಳವಡಿಸಲಾಗಿದೆ. ಅಲ್ಲದೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಒಟ್ಟು 51 ಪ್ರಥಮ ದರ್ಜೆ ಭೂಮಾಪಕರ ಹುದ್ದೆಗಳು ಹಾಗೂ 1 ದ್ವಿತೀಯ ದರ್ಜೆ ಭೂಮಾಪಕರ ಹುದ್ದೆ ಮಂಜೂರಾಗಿದ್ದು, ಇವುಗಳಲ್ಲಿ 2 ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತವೆ. ಖಾಲಿ ಇರುವ ಭೂಮಾಪಕರ ಹುದ್ದೆಗಳನ್ನು ನಿಯೋಜನೆ ಮೇರೆಗೆ ನೇಮಿಸುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸಣ್ಣ ನೀರಾವರಿ ಕೆರೆಗಳ ಸರ್ವೆಕಾರ್ಯವನ್ನು ಕಂದಾಯ ಇಲಾಖೆಯ ಭೂಮಾಪಕರು ಹಾಗೂ ಸದರಿ ಇಲಾಖೆಯಿಂದ ಪರವಾನಿಗೆ ಪಡೆದ ಖಾಸಗಿ ಭೂಮಾಪಕರಿಂದ ಭೂ ಮಾಪನ ನಡೆಸಿ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







