ಬಿಜೆಪಿ, ಕಾಂಗ್ರೆಸ್‌ಗೆ ವಿದೇಶಿ ದೇಣಿಗೆ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ, ಜು. ೩: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)-1976ರ ತಿರೋಗಾಮಿ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ಅನಿವಾಸಿ ಭಾರತೀಯ ನೇತೃತ್ವದ ಕಂಪೆನಿಗಳು ಕಾಂಗ್ರೆಸ್ ಹಾಗೂ ಬಿಜೆಪಿಗೆ ನೀಡಿದ ಸಂದೇಹಾಸ್ಪದ ರಾಜಕೀಯ ದೇಣಿಗೆ ರಕ್ಷಿಸುವುದು ತಿದ್ದುಪಡಿಯ ಉದ್ದೇಶ ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಪ್ರತಿಪಾದಿಸಿದೆ.
ಮನವಿ ಸಲ್ಲಿಸಿದ ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದಾರೆ. ವಕೀಲೆ ನೇಹಾ ರತಿ ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ನೋಟಿಸು ಜಾರಿ ಮಾಡಿದೆ.
ಸರಕಾರ ತಿದ್ದುಪಡಿ ಸಮರ್ಥಿಸಿಕೊಂಡು ಔಪಚಾರಿಕ ಪ್ರತಿಕ್ರಿಯೆ ದಾಖಲಿಸಬೇಕಿದೆ. ವೇದಾಂತದಂತಹ ಅನಿವಾಸಿ ಭಾರತೀಯರ ಕೆಲವು ಕಂಪೆನಿಗಳು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ದೇಣಿಗೆ ನೀಡುವುದನ್ನು ಅಕ್ರಮ ಎಂದು ಘೋಷಿಸಿ ೨೦೧೪ ಮಾರ್ಚ್ ೨೮ರಂದು ದಿಲ್ಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಈ ತಿದ್ದುಪಡಿ ಮಾಡಲಾಗಿತ್ತು.
ಕಾನೂನು ಪ್ರಕಾರ ರಾಜಕೀಯ ಪಕ್ಷಗಳು ವಿದೇಶಿ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ತಪ್ಪು. ಒಮ್ಮೆ ದಿಲ್ಲಿ ಉಚ್ಚ ನ್ಯಾಯಾಲಯ ದೇಣಿಗೆ ಸ್ವೀಕರಿಸಿದ ವಿರುದ್ಧ ತೀರ್ಪು ನೀಡಿದ ಹಾಗೂ ಸ್ವೀಕರಿಸಿದವರ ವಿರುದ್ಧ ಆರು ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಹಾಗೂ ಸರಕಾರಕ್ಕೆ ನಿರ್ದೇಶಿಸಿದ ಬಳಿಕ ದೇಣಿಗೆಯನ್ನು ಸಕ್ರಮಗೊಳಿಸಲು ಕೇಂದ್ರ ಸರಕಾರ ಕಾಯ್ದೆಗೆ ತಿರೋಗಮಿ ತಿದ್ದುಪಡಿ ತಂದಿತ್ತು.
ವಿದೇಶಿ ದೇಣಿಗೆ ಸ್ವೀಕರಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ತಪ್ಪೆಸಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಅನೂರ್ಜಿತಗೊಳಿಸಲು ಈ ತಿದ್ದುಪಡಿ ತರಲಾಗಿದೆ ಎಂದು ಎಡಿಆರ್ ಮನವಿಯಲ್ಲಿ ವಾದಿಸಿದೆ.







