ಕೇಂದ್ರ ಸರಕಾರದ ನೀತಿ ವಿರೋಧಿಸಿ ರಾಷ್ಟ್ರದಾದ್ಯಂತ ಯಾತ್ರೆ ನಡೆಸಲು ರೈತ ಸಂಘಟನೆ ನಿರ್ಧಾರ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ

ಹೊಸದಿಲ್ಲಿ, ಜು.3: ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಹಾಗೂ ರೈತರ ಸಂಕಷ್ಟಕ್ಕೆ ಪರಿಹಾರ ರೂಪಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯವನ್ನು ದೇಶದಾದ್ಯಂತ ಎತ್ತಿತೋರಿಸುವ ಉದ್ದೇಶದಿಂದ ಆಗಸ್ಟ್ 9ರಿಂದ ರಾಷ್ಟ್ರದಾದ್ಯಂತ ಯಾತ್ರೆಯ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ ತಿಳಿಸಿದೆ.
ದೇಶದ 130 ರೈತ ಸಂಘಟನೆಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಕಿಸಾನ್ ಸಂಘದ ಆಶ್ರಯದಲ್ಲಿ ನಡೆಯಲಿರುವ ಯಾತ್ರೆಯು ಜಮ್ಮು ಕಾಶ್ಮೀರದಿಂದ ಆರಂಭವಾಗಿ ಕನ್ಯಾಕುಮಾರಿಯಲ್ಲಿ ಮುಕ್ತಾಯವಾಗಲಿದೆ ಎಂದು ಸಂಘದ ಸಂಯೋಜಕ ಶಿವಕುಮಾರ್ ಶರ್ಮ ತಿಳಿಸಿದ್ದಾರೆ.
ದೇಶದಾದ್ಯಂತ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಅವರನ್ನು ನಿರ್ಲಕ್ಷಿಸುತ್ತಿದೆ. ಆದ್ದರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಮೂಲಕ ರೈತರನ್ನು ಒಗ್ಗೂಡಿಸಲು ನಿರ್ಧರಿಸಲಾಗಿದೆ. ಯಾತ್ರೆಯು ಮಧ್ಯಪ್ರದೇಶ ರಾಜ್ಯವನ್ನು ತಲುಪಿದ ಬಳಿಕ ಪ್ರತಿಭಟನೆ ತೀವ್ರಗೊಳ್ಳಲಿದೆ(ಮಧ್ಯಪ್ರದೇಶವು ರಾಷ್ಟ್ರೀಯ ಕಿಸಾನ್ ಸಂಘ ರೂಪುಗೊಂಡ ಸ್ಥಳವಾಗಿದೆ). ಮಧ್ಯಪ್ರದೇಶದಲ್ಲಿ ಒಂದು ತಿಂಗಳಿಡೀ ನಡೆಯುವ ಯಾತ್ರೆಯಲ್ಲಿ ಪ್ರತೀ ಹಳ್ಳಿಹಳ್ಳಿಯಲ್ಲೂ ಸಂಘದ ಸದಸ್ಯರು ಸಂಚರಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಈ ಮಧ್ಯೆ, ಯೋಗೇಂದ್ರ ಯಾದವ್ ನೇತೃತ್ವದ ರೈತರ ಸಂಘಟನೆ ‘ಸ್ವರಾಜ್ ಇಂಡಿಯಾ’ ಜುಲೈ 1ರಿಂದ 10 ದಿನಗಳಾವಧಿಯ ಯಾತ್ರೆಯನ್ನು ಹರ್ಯಾಣದಲ್ಲಿ ನಡೆಸಲು ನಿರ್ಧರಿಸಿದೆ. ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚದ 1.5ರಷ್ಟು ಬೆಲೆ ದೊರಕಬೇಕು ಹಾಗೂ ರೈತರಿಗೆ ಸಾಕಷ್ಟು ಉದ್ಯೋಗಾವಕಾಶ ನೀಡಬೇಕು ಎಂಬುದು ಸ್ವರಾಜ್ ಇಂಡಿಯಾದ ಆಗ್ರಹವಾಗಿದೆ. ಅಲ್ಲದೆ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಕೂಡಾ ಮುಂದಿನ ದಿನದಲ್ಲಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ದಿಲ್ಲಿಯಲ್ಲಿ ಬೃಹತ್ ಯಾತ್ರೆ ನಡೆಸುವುದಾಗಿ ತಿಳಿಸಿದೆ.







