ಉರ್ದು ಮಾತೃಭಾಷೆಯಾಗಿರುವವರ ಸಂಖ್ಯೆಯಲ್ಲಿ ಇಳಿಕೆ: ಜನಗಣತಿ ವರದಿ

ಹೊಸದಿಲ್ಲಿ,ಜು.3:ಇತ್ತೀಚಿನ ಜನಗಣತಿ ವರದಿಯಂತೆ ಉರ್ದುವನ್ನು ತಮ್ಮ ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆಯಲ್ಲಿ ಶೇ.1.58ರಷ್ಟು ಇಳಿಕೆಯಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಭಾರತೀಯ ಮುಸ್ಲಿಮರೊಂದಿಗೆ ಗುರುತಿಸಿಕೊಂಡಿರುವ ಉರ್ದುವನ್ನು 2001 ಜನಗಣತಿ ಸಂದರ್ಭ 5.10 ಕೋ.ಜನರು ತಮ್ಮ ಮಾತೃಭಾಷೆಯಾಗಿ ಉಲ್ಲೇಖಿಸಿದ್ದರು. 2011 ರ ಜನಗಣತಿಯಲ್ಲಿ ಈ ಸಂಖ್ಯೆ ಐದು ಕೋಟಿಗೆ ಇಳಿದಿದ್ದು,ಮಾತೃಭಾಷೆಗಳ ಪಟ್ಟಿಯಲ್ಲಿ ಆರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ.
2001-2011ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯು ಸುಮಾರು ಮೂರು ಕೋಟಿಯಷ್ಟು ಹೆಚ್ಚಾಗಿದ್ದರೂ ಉರ್ದು ಮಾತನಾಡುವವರ ಸಂಖ್ಯೆಯು ಕುಸಿದಿರುವುದು ಗಮನಾರ್ಹವಾಗಿದೆ.
ತನ್ಮಧ್ಯೆ,2001ರಲ್ಲಿ 4.6 ಕೋಟಿ ಜನರು ಮಾತನಾಡುವುದರೊಂದಿಗೆ ಏಳನೇ ಸ್ಥಾನದಲ್ಲಿದ್ದ ಗುಜರಾತಿ ಭಾಷೆಯು 2011ರಲ್ಲಿ 5.5 ಕೋ.ಜನರ ಮಾತೃಭಾಷೆಯಾಗುವುದರೊಂದಿಗೆ ಆರನೇ ಸ್ಥಾನಕ್ಕೆ ಜಿಗಿದಿದೆ.
ಹಿಂದಿ ಶೇ.25.19 ರಷ್ಟು ಏರಿಕೆಯೊಂದಿಗೆ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಷೆಯಾಗಿದೆ. 2001-2011ರ ಅವಧಿಯಲ್ಲಿ ಹಿಂದಿ ಭಾಷಿಕರ ಸಂಖ್ಯೆ ಸುಮಾರು 10 ಕೋ.ಗಳಷ್ಟು ಹೆಚ್ಚಾಗಿದೆ. ಈ ವರ್ಗದಲ್ಲಿ ನಂತರದ ಸ್ಥಾನಗಳಲ್ಲಿ ಕಾಶ್ಮೀರಿ(ಶೇ.22.97 ಏರಿಕೆ), ಗುಜರಾತಿ(ಶೇ.20.4), ಮಣಿಪುರಿ(ಶೇ.20.07) ಮತ್ತು ಬೆಂಗಾಲಿ(ಶೇ.16.63) ಇವೆ.
ಇಂಗ್ಲೀಷ್‌ನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 2001ರಲ್ಲಿ 2,26,000 ಆಗಿದ್ದು, 2011ರಲ್ಲಿ 2,60,000ಕ್ಕೇರುವ ಮೂಲಕ ಶೇ.14.67ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಅತ್ಯಂತ ಹೆಚ್ಚಿನ ಇಂಗ್ಲೀಷ್ ಭಾಷಿಕರು ಮಹಾರಾಷ್ಟ್ರದಲ್ಲಿದ್ದು,ನಂತರದ ಸ್ಥಾನಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿವೆ.
ಅನುಸೂಚಿತ ಭಾಷೆಗಳ ಪೈಕಿ ಸಂಸ್ಕೃತವು 2001ರಿಂದ ಶೇ.76ರಷ್ಟು ಏರಿಕೆಯನ್ನು ದಾಖಲಿಸಿದ್ದರೂ ಅತ್ಯಂತ ಕಡಿಮೆ ಜನರು(24,821) ಮಾತನಾಡುವ ಭಾಷೆಯಾಗಿಯೇ ಉಳಿದುಕೊಂಡಿದೆ.







