ಬಲಾಢ್ಯ ಭೂಗಳ್ಳ ಒತ್ತುವರಿ ತೆರವುಗೊಳಿಸಿ, ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಿ: ಶಾಸಕ ಎ.ಟಿ.ರಾಮಸ್ವಾಮಿ
ಬೆಂಗಳೂರು, ಜು. 3: ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿದ ಬಲಾಢ್ಯ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅವರ ಒತ್ತುವರಿ ತೆರವು ಮಾಡಿ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಸರಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ವಿರುದ್ಧ ನಾನು ವರದಿ ನೀಡಿದ್ದು, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವರು ವಾಸಕ್ಕಾಗಿ ಸಣ್ಣ-ಪುಟ್ಟ ಮನೆ ಕಟ್ಟಿಕೊಂಡಿದ್ದು, ಅಂತಹವನ್ನು ಸಕ್ರಮ ಮಾಡಿ. ಸರಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ನುಂಗಿ ನೀರು ಕುಡಿದ ದೊಡ್ಡ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಪ್ರಭಾವಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಎಂದರು.
ಪೊಲೀಸ್ ಅಧಿಕಾರಿಯೊಬ್ಬರು ನಿಯಮ ಬಾಹಿರವಾಗಿ ಸರಕಾರದ ಮೇಲೆ ಒತ್ತಡ ತಂದಾಗ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಮುಂದಿನ ಕ್ರಮ ಕೈಗೊಳ್ಳಲಿಲ್ಲ ಎಂದ ಅವರು, ಪಹಣಿ ಮೇಲೆ ಹೈಕೋರ್ಟ್ ತಡೆಯಾಜ್ಞೆ ಇದೆ ಎಂದು ಸುಳ್ಳು ಮುದ್ರೆ ಒತ್ತಿಸಲಾಗಿದೆ. ಆದರೆ, ತಡೆಯಾಜ್ಞೆ ಇಲ್ಲ. ನಾಡಿನ ಅನ್ನತಿಂದು ದ್ರೋಹ ಬಗೆದ ಅಧಿಕಾರಿಯ ಎಲ್ಲ ಚಿನ್ನದ ಪದಕ, ಪಿಂಚಣಿ, ಭತ್ತೆ ಹಿಂಪಡೆಯಿರಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಲಾಢ್ಯ ಭೂಗಳ್ಳರು ಆಡಳಿತ ಯಂತ್ರಾಂಗವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಮಾಫಿಯಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಲಂಚದ ಆಮಿಷವೊಡ್ಡಿದ್ದಾರೆಂದು ಗಮನಸೆಳೆದ ಅವರು, ಸರಕಾರಿ ಭೂಮಿ ಕಬಳಿಕೆಯ ಬಗ್ಗೆ ವಿವರಿಸಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸ್ಪೀಕರ್ ರಮೇಶ್‌ಕುಮಾರ್, ಮುಖ್ಯ ನ್ಯಾಯಮೂರ್ತಿ ದೂರು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ರಾಮಸ್ವಾಮಿ ಅವರಿಗೆ ಭಯ ಇರಬೇಕೇನೋ ಎಂದರು. ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಗೆ ಭಯವೆಂದರೆ ರಾಜ್ಯದ ಜನತೆಗೆ ರಕ್ಷಣೆ ಇದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.
‘ಮರ ಬಗ್ಗಿ ಶಿರಕ್ಕೊರಗಿದರೆ ನ್ಯಾಯವೆಲ್ಲಿದೆಯೋ ಹರಿಯೇ’ ಎಂಬ ಮಾತಿನಂತೆ ಯಾರಿಗೆ ಯಾರ ರಕ್ಷಣೆ ಎಂದು ರಮೇಶ್ ಕುಮಾರ್, ಮುಖ್ಯ ನ್ಯಾಯಮೂರ್ತಿ ಲಂಚದ ಆಮಿಷವೊಡ್ಡಿದ ಪ್ರಕರಣದ ಬಗ್ಗೆ ದೂರು ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಉಪ್ಪಾರಪೇಟೆ ಠಾಣೆ ನಂ.1 ಹೇಗೇ?
‘ಕಮಾಯಿಸುವುದರಲ್ಲಿ ನಂ.1 ಸ್ಥಾನದಲ್ಲಿರುವ ಉಪ್ಪಾರಪೇಟೆ ಪೊಲೀಸ್ ಠಾಣೆ ಕಳ್ಳಕಾಕರನ್ನು ಸದೆಬಡಿಯಲು ಹೇಗೆ ಸಾಧ್ಯ. ಕಾನೂನು ಸುವ್ಯವಸ್ಥೆಯನ್ನು ಯಾವ ರೀತಿ ಕಾಪಾಡಬಹುದು. ಗೃಹ ಇಲಾಖೆ ತನ್ನ ಗೌಪ್ಯತೆ ಕಾಪಾಡಿಕೊಳ್ಳಲು ಆ ಠಾಣೆಗೆ ಯಾವುದೇ ಕಾರಣಕ್ಕೂ ಸ್ಥಳೀಯರನ್ನು ನಿಯೋಜನೆ ಮಾಡಬಾರದು’
-ಎ.ಟಿ.ರಾಮಸ್ವಾಮಿ ಶಾಸಕರು







