ಅಡುಗೆ ನೌಕರರನ್ನು ಕಾಯಂ ಮಾಡಲು ಬರುವುದಿಲ್ಲ: ಸಚಿವ ಪುಟ್ಟರಂಗಶೆಟ್ಟಿ

ಬೆಂಗಳೂರು, ಜು.3: ರಾಜ್ಯದ ಹಿಂದುಳಿದ ಸಮಾಜ ಕಲ್ಯಾಣ ಇಲಾಖೆಯ ಬಾಲಕ ಮತ್ತು ಬಾಲಕಿಯ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಅಡುಗೆಯವರನ್ನು ಕಾಯಂ ಮಾಡಿ ಎನ್ನುವುದರಲ್ಲಿ ಅರ್ಥವಿಲ್ಲ. ಮುಷ್ಕರ ನಡೆಸುತ್ತಿರುವ ಅವರನ್ನು ಭೇಟಿ ಮಾಡಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ನಿಯಮ 330ಎ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎನ್.ರವಿಕುಮಾರ್ ಅವರು ಕೂಡಲೇ ಅಡುಗೆಯವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಪಡಿಸಿದ ವೇಳೆ ಮಧ್ಯಪ್ರವೇಶಿಸಿದ ಸಚಿವರು, ಎನ್‌ಜಿಒ ಸಂಸ್ಥೆಗಳ ಮೂಲಕ ಈ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಮೂಲಕ 5,965 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಪೈಕಿ 4,583 ಹುದ್ದೆಗಳನ್ನು ಖಾಸಗಿ ಸಂಸ್ಥೆಗಳು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿದ್ದರು. ಅವರಿಗೆ ಸಂಭಾವನೆ ಕೂಡ ನೀಡಲಾಗುತ್ತಿತ್ತು ಎಂದರು.
ಕಳೆದ 6 ದಿನಗಳಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಡುಗೆಯವರು ಮುಷ್ಕರ ನಡೆಸುತ್ತಿದ್ದಾರೆ. ಸರಕಾರಕ್ಕೆ ಏನಾದರೂ ಮಾನವೀಯತೆ ಇದೆಯೇ ಎಂದು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸರಕಾರವನ್ನು ಚುಚ್ಚಿದರು. ಆಗ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಧ್ಯಾಹ್ನ ಈ ಸಂಬಂಧ ಸಭೆ ನಡೆಸಿ, ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು.
ಕಳೆದ ಸದನದಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ರವರು ಹಾಸ್ಟೆಲ್‌ನಲ್ಲಿ ಅಡುಗೆ ಮಾಡುತ್ತಿರುವ ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ರವಿಕುಮಾರ್, ಸರಕಾರದ ಗಮನಕ್ಕೆ ತಂದರು. ಸಭಾಪತಿ ಬಸವರಾಜ ಹೊರಟ್ಟಿಯವರು ಇದು ಗಂಭೀರವಾದ ವಿಷಯ. ಸಭೆ ನಡೆಸಿ, ಆದಷ್ಟು ಬೇಗ ನಿರ್ಧಾರ ಪ್ರಕಟಿಸಬೇಕು ಎಂದು ಹೇಳಿದರು.







