ಸಾಲಮನ್ನಾ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರವಲ್ಲ: ಶಾಸಕ ಎ.ಟಿ.ರಾಮಸ್ವಾಮಿ

ಬೆಂಗಳೂರು, ಜು. 3: ಸಾಲಮನ್ನಾ ಮಾಡುವುದರಿಂದ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಇದರಿಂದ ನೇಣುಗಂಬಕ್ಕೇರುವುದು ತಪ್ಪಿಸಬಹುದಷ್ಟೇ ಎಂದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ಗ್ರಾಮೀಣ ಪ್ರವೇಶಕ್ಕೆ ಹೆಚ್ಚು ಸಾಲ ನೀಡಬೇಕು. ಜತೆಗೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಪ್ರಸ್ತಾವವನ್ನು ಅನುಮೋದಿಸಿ ಮಾತನಾಡಿದ ಅವರು, ಸಾಲಮನ್ನಾ ರೈತರ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರವಷ್ಟೇ. ಆದುದರಿಂದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಬೇಕು ಎಂದು ಕೋರಿದರು.
ಕೇಂದ್ರದ ಬೆಂಬಲ ಬೆಲೆ ನಿಗದಿಪಡಿಸುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳೇ ಇಲ್ಲ. ಆದರೆ, ಪ್ರಧಾನಿ ಮೋದಿ ರೈತರ ಆದಾಯ ದ್ವಿಗುಣಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆಂದು ಲೇವಡಿ ಮಾಡಿದ ಅವರು, ಕೃಷಿ ಉತ್ಪನ್ನಗಳ ಬೆಲೆ ಕುಸಿತದ ವೇಳೆ ಸರಕಾರದ ಮಧ್ಯಪ್ರವೇಶವೂ ಮಧ್ಯವರ್ತಿಗಳಿಗೆ ಅನುಕೂಲ ಕಲ್ಪಿಸುತ್ತಿದೆ. ಇಂತಹ ಲೋಪಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾಕ್ಕೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಆದರೂ ವಿಪಕ್ಷ ನಾಯಕ ಬಿಎಸ್‌ವೈ ಸಾಲಮನ್ನಾಕ್ಕೆ ಆಗ್ರಹಿಸಿ ಹೋರಾಟ ಮಾಡುವ ಮಾತುಗಳನ್ನು ಆಡಿದ್ದಾರೆಂದ ಅವರು, ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರ್ಮಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಸ್ಥಳೀಯ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಕೋರಿದರು.
ಗಾಮೀಣ ಮತ್ತು ನಗರ ಪ್ರದೇಶದ ಜನರಿಗೆ ನದಿ ಮೂಲದಿಂದ ಕುಡಿಯುವ ನೀರನ್ನು ಒದಗಿಸಬೇಕು. ಶಿಕ್ಷಣ, ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸಬೇಕು ಎಂದ ಅವರು, ದೇಶದ ಜಿಡಿಪಿ ಕೊಡುಗೆಯಲ್ಲಿ ಕರ್ನಾಟಕ ಮೂರನೆ ಸ್ಥಾನದಲ್ಲಿದೆ. ಶೇ.60ರಷ್ಟು ಜನ ಕೃಷಿ ಅವಲಂಬಿತರಿದ್ದರೂ ಜಿಡಿಪಿಗೆ ಶೇ.16ರಷ್ಟು ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದದ್ದು, ಕೈಗಾರಿಕೋದ್ಯಮದಿಂದ ಬರುತ್ತಿದ್ದು ಈ ಅಂತರ ಕಡಿಮೆ ಮಾಡಬೇಕು ಎಂದರು.
‘ರೈತರ ಆತ್ಮಹತ್ಯೆಗೂ ನಮಗೂ ಸಂಬಂಧವಿಲ್ಲ, ಅದು ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ರಾಜ್ಯಗಳ ನೆರವಿಗೆ ಧಾವಿಸದಿದ್ದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದತೆ ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಲಿದೆ’
-ಎ.ಟಿ.ರಾಮಸ್ವಾಮಿ ಜೆಡಿಎಸ್ ಸದಸ್ಯ







