ಬಡವರ ಯೋಜನೆಯನ್ನು ಕೇಂದ್ರ ಸರಕಾರ ತಮಾಷೆಯ ವಿಷಯವಾಗಿಸಿದೆ: ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ, ಜು.3: ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಯೋಜನೆಯ ಕರಡು ಪ್ರತಿಯನ್ನು ಕಾರ್ಮಿಕ ಸಚಿವಾಲಯದ ಜಾಲತಾಣದಲ್ಲಿ ಹಾಕದೆ ಇರುವ ಕಾರಣಕ್ಕೆ ಮಂಗಳವಾರ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಸರಕಾರ ಸಲ್ಲಿಸಿರುವ ಅಫಿದಾವಿತ್‌ಅನ್ನು ಸಂಪೂರ್ಣ ಸುಳ್ಳು ಎಂದು ಜರೆದಿರುವ ನ್ಯಾಯಾಲಯ, 30,000 ಕೋಟಿ ರೂ.ನೊಂದಿಗೆ ಬಡವರಿಗಾಗಿ ಸಿದ್ಧಪಡಿಸಲಾಗುತ್ತಿರುವ ಯೋಜನೆಯನ್ನು ಕೇಂದ್ರ ಸರಕಾರ ಹಾಸ್ಯದ ವಿಷಯವನ್ನಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನೀವು ಇದನ್ನು ತಮಾಷೆಯೆಂದು ತಿಳಿದಿದ್ದೀರಿ. 30,000 ಕೋಟಿ ರೂ. ಈ ಯೋಜನೆಗೆ ಬಳಸಲಾಗುತ್ತಿದೆ. ಅಷ್ಟಕ್ಕೂ ಸಂಕಷ್ಟಕ್ಕೀಡಾಗುವುದು ಯಾರು?, ಈ ಬಡ ಜನರು. ನೀವು ಬಡವರತ್ತ ತೋರಿಸುವ ಕರುಣೆ ಮತ್ತು ದಯೆ ಇದೆಯೇ? ಎಂದು ನ್ಯಾಯಾಲಯ ಕಿಡಿಕಾರಿದೆ. ತನ್ನ ಆದೇಶವನ್ನು ಯಾಕೆ ಪಾಲಿಸಲಾಗಿಲ್ಲ ಎಂಬುದಕ್ಕೆ ಉತ್ತರ ನೀಡುವಂತೆ ಕೇಂದ್ರ ಕಾರ್ಮಿಕ ಕಾರ್ಯದರ್ಶಿಗೆ ಸೂಚಿಸುವ ವೇಳೆ ನ್ಯಾಯಾಧೀಶ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರ ನ್ಯಾಯಾಲಯ ಪೀಠ ಈ ರೀತಿ ಕೆಂಡ ಕಾರಿದೆ. ಬಡವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಲು ಮೀಸಲಿಡಲಾಗಿದ್ದ 30,000 ಕೋಟಿ ರೂ.ನಲ್ಲಿ ಒಂದು ಭಾಗವನ್ನು ಲ್ಯಾಪ್‌ಟಾಪ್ ಮತ್ತು ವಾಶಿಂಗ್ ಮೆಶಿನ್ ಖರೀದಿಸಲು ಬಳಸಲಾಗಿದೆ ಹಾಗೂ ಕೇವಲ ಶೇ. 10ನ್ನು ಮಾತ್ರ ನಿಜವಾದ ಉದ್ದೇಶಕ್ಕೆ ಬಳಸಲಾಗಿದೆ ಎಂದು ತಿಳಿಸಿ ಸಿಎಜಿ ಸಲ್ಲಿಸಿದ್ದ ಅಫಿದಾವಿತ್‌ನ ಹಿನ್ನೆಲೆಯಲ್ಲಿ ಶ್ರೇಷ್ಠ ನ್ಯಾಯಾಲಯವು ಈ ಹಿಂದೆಯೂ ಈ ವಿಷಯದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಅಫಿದಾವಿತ್‌ನ ಹಿನ್ನೆಲೆಯಲ್ಲಿ, ಬಡಕಾರ್ಮಿಕರಿಗೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಮತು ಪಿಂಚಣಿಯನ್ನು ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 30ರ ಒಳಗಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಯೋಜನೆಯ ಮಾದರಿಯನ್ನು ರೂಪಿಸುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿತ್ತು.
ಕಾರ್ಮಿಕರ ಕಲ್ಯಾಣ ಯೋಜನೆಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ ಮತ್ತು ಕಾರ್ಮಿಕ ಸಚಿವಾಲಯದ ಜಾಲತಾಣದಲ್ಲಿ ಹಾಕಲಾಗಿದೆ ಎಂದು ಕೇಂದ್ರದ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾವು ನಿಮ್ಮ ಜಾಲತಾಣದಲ್ಲಿ ಹುಡುಕಾಡಿದ್ದೇವೆ. ಅದರಲ್ಲಿ ಅಂಥ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿರುಗೇಟು ನೀಡಿದ್ದರು. ಆದರೆ ಇದನ್ನೊಪ್ಪದ ವಕೀಲರು ಕರಡು ಯೋಜನೆಯ ಪ್ರತಿ ಜಾಲತಾಣದಲ್ಲಿದೆ ಮತ್ತು ಕೇಂದ್ರ ತನ್ನ ಅಫಿದಾವಿತ್‌ನಲ್ಲೂ ಅದನ್ನೇ ಹೇಳಿದೆ ಎಂದು ವಾದಿಸಿದಾಗ, ಇದು ಬರೀ ಸುಳ್ಳು. ಕರಡು ಯೋಜನೆಯನ್ನು ಯಾಕೆ ಹಾಕಲಾಗಿಲ್ಲ? ಎಂದು ಪೀಠವು ಖಾರವಾಗಿ ಪ್ರಶ್ನಿಸಿದೆ.
ಒಂದು ತಿಂಗಳ ಕಾಲ ಯೋಜನೆಯ ಮಾಹಿತಿ ಜಾಲತಾಣದಲ್ಲಿತ್ತು. ಆದರೆ ನಂತರ ತೆಗೆದು ಹಾಕಲಾಯಿತು ಎಂದು ವಕೀಲರು ತಿಳಿಸಿದಾಗ, ಯಾಕೆ?, ಇಲ್ಲಿ ಏನು ನಡೆಯುತ್ತಿದೆ?, ನೀವು ಯಾರಿಗೆ ಮೋಸ ಮಾಡಲು ಬಯಸುತ್ತಿದ್ದೀರಿ, ದಯಮಾಡಿ ನಮಗೆ ತಿಳಿಸಿ. ನಿಮ್ಮ ಅಫಿದಾವಿತ್ ಸಂಪೂರ್ಣ ಸುಳ್ಳಾಗಿದೆ. ಯೋಜನೆಯ ಕರಡು ಪ್ರತಿಯನ್ನು ಕೇವಲ ಒಂದು ತಿಂಗಳು ಜಾಲತಾಣದಲ್ಲಿ ಯಾಕೆ ಹಾಕಲಾಯಿತು? ಎಂದು ಪೀಠವು ಪ್ರಶ್ನಿಸಿತು.







