ಫೆಲೆಸ್ತೀನ್ ನಿರಾಶ್ರಿತರ ನಿಧಿಗೆ ದೇಣಿಗೆ ಮುಂದುವರಿಸಿ
ಅಮೆರಿಕದ ಮಾಜಿ ವಿಶ್ವಸಂಸ್ಥೆ ರಾಯಭಾರಿಗಳಿಂದ ಟ್ರಂಪ್ ಆಡಳಿತಕ್ಕೆ ಒತ್ತಡ

ವಾಶಿಂಗ್ಟನ್, ಜು. 3: ಫೆಲೆಸ್ತೀನ್ ನಿರಾಶ್ರಿತರಿಗೆ ನೆರವು ನೀಡುವ ವಿಶ್ವಸಂಸ್ಥೆಯ ಘಟಕ ಸಂಸ್ಥೆಗೆ ಕೊಡುತ್ತಿರುವ ದೇಣಿಗೆಯನ್ನು ಮುಂದುವರಿಸುವಂತೆ ಅಮೆರಿಕದ 7 ಮಾಜಿ ವಿಶ್ವಸಂಸ್ಥೆ ರಾಯಭಾರಿಗಳು ಅಮೆರಿಕದ ಟ್ರಂಪ್ ಆಡಳಿತಕ್ಕೆ ಸೋಮವಾರ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾಮಗಾರಿ ಸಂಸ್ಥೆ (ಯುಎನ್‌ಆರ್‌ಡಬ್ಲ್ಯುಎ)ಗೆ ನೀಡುವ ನೆರವನ್ನು ತಡೆಹಿಡಿಯುವುದರಿಂದ ಇಸ್ರೇಲ್ ಮತ್ತು ಜೋರ್ಡಾನ್ ಸೇರಿದಂತೆ, ಮಧ್ಯಪ್ರಾಚ್ಯ ವಲಯದಲ್ಲಿರುವ ಅಮೆರಿಕದ ಮಿತ್ರ ದೇಶಗಳು ರಾಷ್ಟ್ರೀಯ ಭದ್ರತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊಗೆ ಬರೆದ ಪತ್ರವೊಂದರಲ್ಲಿ ಮಾಜಿ ರಾಯಭಾರಿಗಳು ಹೇಳಿದ್ದಾರೆ.
ಈ ಏಳು ಮಾಜಿ ರಾಯಭಾರಿಗಳಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್- ಎರಡೂ ಆಡಳಿತಗಳ ರಾಯಭಾರಿಗಳಿದ್ದಾರೆ.
‘‘ಬಜೆಟ್ ಕೊರತೆಯನ್ನು ನೀಗಿಸುವುದಕ್ಕಾಗಿ ಫೆಲೆಸ್ತೀನ್ ನಿಧಿಗೆ ನೀಡುತ್ತಿರುವ ನೆರವನ್ನು ಮುಂದುವರಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ’’ ಎಂದು ಮಾಜಿ ವಿಶ್ವಸಂಸ್ಥೆ ರಾಯಭಾರಿಗಳು ಹೇಳಿದ್ದಾರೆ.
ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯು. ಬುಶ್ ಅಡಿಯಲ್ಲಿ ಸೇವೆ ಸಲ್ಲಿಸಿದ ಥಾಮಸ್ ಪಿಕರಿಂಗ್ ಮತ್ತು ಎಡ್ವರ್ಡ್ ಪರ್ಕಿನ್ಸ್, ಅಧ್ಯಕ್ಷ ಬಿಲ್ ಕ್ಲಿಂಟನ್ ಅವಧಿಯಲ್ಲಿ ಸೇವೆ ಸಲ್ಲಿಸಿರುವ ಮ್ಯಾಡಲೀನ್ ಆಲ್‌ಬ್ರೈಟ್ ಮತ್ತು ಬಿಲ್ ರಿಚರ್ಡ್‌ಸನ್, ಜಾರ್ಜ್ ಡಬ್ಲ್ಯು. ಬುಶ್ ಕಾಲದಲ್ಲಿ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಜಾನ್ ನೀಗ್ರೊಪಾಂಟ್ ಮತ್ತು ಬರಾಕ್ ಒಬಾಮ ಅವಧಿಯಲ್ಲಿ ಸೇವೆ ಸಲ್ಲಿಸಿರುವ ಸುಸಾನ್ ರೈಸ್ ಮತ್ತು ಸಮಂತಾ ಪವರ್.
ಗಂಭೀರ ಬಜೆಟ್ ಬಿಕ್ಕಟ್ಟು
ವಿಶ್ವಸಂಸ್ಥೆಯ ಫೆಲೆಸ್ತೀನ್ ನೆರವು ಸಂಸ್ಥೆಯು ಗಂಭೀರ ಬಜೆಟ್ ಕೊರತೆಯನ್ನು ಎದುರಿಸುತ್ತಿದೆ. ಅಮೆರಿಕ ತನ್ನ ದೇಣಿಗೆಯನ್ನು ನಿಲ್ಲಿಸಿರುವುದು ಇದಕ್ಕೆ ಆಂಶಿಕ ಕಾರಣವಾಗಿದೆ.
ಯುಎನ್‌ಆರ್‌ಡಬ್ಲುಎಗೆ 250 ಮಿಲಿಯ ಡಾಲರ್ (ಸುಮಾರು 1,700 ಕೋಟಿ ರೂಪಾಯಿ) ಮೊತ್ತದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಮೊತ್ತ ಲಭ್ಯವಿಲ್ಲ್ಲದಿದ್ದರೆ ಗಾಝಾ ಪಟ್ಟಿ, ಪಶ್ಚಿಮ ದಂಡೆ, ಜೋರ್ಡಾನ್, ಲೆಬನಾನ್ ಮತ್ತು ಸಿರಿಯಗಳಲ್ಲಿರುವ 50 ಲಕ್ಷ ಫೆಲೆಸ್ತೀನಿಯರಿಗೆ ನೀಡಲಾಗುತ್ತಿರುವ ಆಹಾರ ನೆರವು, ವೈದ್ಯಕೀಯ ಚಿಕಿತ್ಸೆ ಮತ್ತು ಸ್ವಚ್ಛತೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಗಣನೀಯವಾಗಿ ಕಡಿತಗೊಳಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.







