ಪ್ರೊ.ಕೆ.ಎಸ್.ರಂಗಪ್ಪ ಒಬ್ಬ ಪುಕ್ಕಲ: ಗೋ.ಮಧುಸೂದನ್

ಮೈಸೂರು,ಜು.3: ಕಳೆದ ಮೂರು ವರ್ಷಗಳಿಂದ ಮೂಡಿದ್ದ ನನ್ನೆಲ್ಲ ಪ್ರಶ್ನೆಗಳಿಗೂ ಮೈಸೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಇಂದು ಉತ್ತರಿಸುತ್ತಾರೆಂದು ಅತಿ ಭರವಸೆ ನಿರೀಕ್ಷಿಸಿದ್ದ ನನಗೂ ಸೇರಿದಂತೆ ಪತ್ರಕರ್ತರಿಗೂ ತೀವ್ರ ನಿರಾಸೆಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹೇಳಿದರು.
ಕಾನೂನಾತ್ಮಕ ತೊಡಕಿನಿಂದ ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಂಗಪ್ಪ ಹಾಗೂ ಗೋ.ಮ ಸಂವಾದ ಕಾರ್ಯಕ್ರಮವು ರದ್ದಾಗಿದ್ದರೂ ಸಹ ಸಾಮಾಜಿಕ ಕಳಕಳಿಯಿಂದ ತಾವೇ ಸ್ವತಃ ಬಂದು ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದ್ದು ಜವಾಬ್ದಾರಿ ಸ್ಥಾನದಲ್ಲಿರುವ ತಮ್ಮ ಆದ್ಯ ಕರ್ತವ್ಯವಾಗಬೇಕಿತ್ತು. ಆದರೆ ನನ್ನ ಪ್ರಶ್ನೆಗಳನ್ನೇ ಎದುರಿಸದೇ ಹೆದರಿ ಓಡಿ ಹೋಗಿರುವ ರಂಗಪ್ಪ ಒಬ್ಬ ಪುಕ್ಕಲ ಎಂದು ಟೀಕಿಸಿದರು.
ಪತ್ರಕರ್ತರ ಸಂಘದ ಪ್ರಾಯೋಜಕತ್ವದ ಹೊರತಾಗಿಯೂ ಇಂದು ಏಕಾಂಗಿಯಾಗಿ ಸುದ್ದಿಗೋಷ್ಠಿ ನಡೆಸಿದ ಗೋ.ಮ ಅವರು, ರಂಗಪ್ಪ ಅಧಿಕಾರವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ 26 ಗಂಭೀರ ಪ್ರಶ್ನಾ ಪಟ್ಟಿಯ ದಾಖಲೆ ಬಿಡುಗಡೆಗೊಳಿಸಿ ಆರೋಪಗಳ ಸುರಿಮಳೆಗೈದರು.
ವಿಜ್ಞಾನಿ, ಅನ್ವೇಷಕನಾದ ರಂಗಪ್ಪನವರು ಕೇವಲ 30 ನಿಮಿಷಕ್ಕಾದರೂ ಬಂದು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಬಹುದಿತ್ತು, ಅದರ ಹೊರತಾಗಿ ಪಲಾಯನ ನಡೆಸಿದ್ದು ತಾವೊಬ್ಬ ನೀಚ, ಮೋಸಗಾರ, ಸಾವಿರಾರು ವಿದ್ಯಾರ್ಥಿಗಳ ಬಾಳನ್ನು ಅಂಧಕಾರಕ್ಕೆ ನೂಕಿದ ನಯವಂಚಕನೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಸಂಘದ ಪ್ರಯೋಜಕತ್ವದ ಹೊರತಾಗಿಯು ಸ್ವಯಂ ನಡೆಸಿದ ಸುದ್ದಿಗೋಷ್ಠಿಯಲ್ಲಿ 10.30ವರೆಗೆ ಪ್ರೊ.ರಂಗಪ್ಪನವರಿಗೆ ಕಾದು ನಂತರ ಮಾತಿಗಿಳಿದ ಅವರು, ಕೆ.ಎಸ್.ಓ.ಯು ದಲ್ಲಿ ನಡೆದ ಎಲ್ಲಾ ಅವ್ಯವಹಾರಗಳನ್ನು ದಾಖಲೆ ಸಮೇತ ಒಂದೊಂದಾಗಿ ಪ್ರಶ್ನೆಗಳನ್ನು ಸವಿಸ್ತರವಾಗಿ ವಿವರಿಸಿದರು. ಉನ್ನತ ವಿಶೇಷ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡು ತಮ್ಮಲ್ಲೆ ಕೇಸ್ ಗಳನ್ನು ಮುಚ್ಚಿ ಹಾಕಲು ಹವಣಿಸುತ್ತಿದ್ದು, ಇವರನ್ನು ಅಧಿಕಾರದಿಂದ ದೂರವಿಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರಲ್ಲಿ ಮನವಿ ಮಾಡಿದರು.
ದೂರು ದಾಖಲಿಸಲು ರಾಜ್ಯಪಾಲರ ಆದೇಶ: ಕೋಟ್ಯಾಂತರ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ರಂಗಪ್ಪನವರನ್ನು ಮೊದಲ ಆರೋಪಿಯನ್ನಾಗಿ ಮಾಡಿ ಜಯಲಕ್ಷ್ಮೀಪುರಂನ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲು ರಾಜ್ಯಪಾಲರು ಆದೇಶಿಸಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ನಡೆದ ಸಿಐಡಿ ತನಿಖೆಯ ಬಿ-ರಿಪೋರ್ಟ್ ಅನ್ನು ಕೆ.ಎಸ್.ಓ.ಯು ಸಮ್ಮತಿಸದ ಹಿನ್ನಲೆಯಲ್ಲಿ ವರದಿಯು ಹಳ್ಳ ಹಿಡಿದಿದೆ. ಅಲ್ಲದೇ ಮುಕ್ತ ವಿವಿಯಲ್ಲಿ ನಡೆದ ಅವ್ಯವಹಾರದ ಕ್ಯಾನ್ಸರ್ ಅನ್ನು ಶತಮಾನೋತ್ಸವ ಕಂಡ ಮೈಸೂರು ವಿವಿಯಲ್ಲಿಯೂ ಹರಡಲು ಯತ್ನಿಸಿದ ಕ್ಯಾನ್ಸರ್ ರಂಗಪ್ಪ ಎಂದು ಲೇವಡಿ ಮಾಡಿದರು.
ಕಾನೂನು ಬಾಹಿರವಾಗಿ ಹಲವು ಲಕ್ಷಾಂತರ ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ. ಕಷ್ಟ ಕಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಗಳು ರಂಗಪ್ಪರವರ ಬೇಜವ್ದಾರಿಯಿಂದ ರದ್ದಿ ಹಾಗೂ ಬೋಂಡಾ ಕಟ್ಟುವ ಪೇಪರ್ ಆಗಿದೆ ಎಂದು ವ್ಯಂಗ್ಯವಾಡಿದರು.
ವೇದಿಕೆ ಸಿದ್ದಗೊಳಿಸಿ ಚರ್ಚೆಗೆ ಸಿದ್ಧ : ಸವಾಲು
ಹಗರಣಕ್ಕೆ ಸಂಬಂಧಿಸಿದಂತೆ ತೀವ್ರ ಕುತೂಹಲ ಕೆರಳಿಸಿದ್ದ ಚರ್ಚೆ ರದ್ದಾಗಿದ್ದು, ಹಲವು ಪತ್ರಕರ್ತರಿಗೆ ನಿರಾಸೆಯಾಗಿದೆ. ಆದ್ರೆ ನಾನೇ ಏಕಾಂಗಿಯಾಗಿಯೇ ಪ್ರಶ್ನೆ ಮಾಡುತ್ತೇನೆ. ಸವಾಲು ಸ್ವೀಕರಿಸಿ ರಂಗಪ್ಪನವರೇ ವೇದಿಕೆ ಸಿದ್ದಗೊಳಿಸಲಿ. ಅಲ್ಲಿಗೆ ಹೋಗಿ ಚರ್ಚೆ ಮಾಡಲು ಸಿದ್ಧನಿದ್ದು, ತಮ್ಮೆಲ್ಲ ಪ್ರಶ್ನೆಗಳು ತಾವು ಉತ್ತರಿಸಬೇಕೆಂದು ಪುನರುಚ್ಚಿಸಿದರು.







