ಸಿಪಿಎಂ ಕಾರ್ಯಕರ್ತರಿಗೆ ಇರಿದ ಪ್ರಕರಣ: ಮೂವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ

ಮಟ್ಟನ್ನೂರ್(ಕೇರಳ), ಜು.3: ಕಣ್ಣೂರಿನ ಮಟ್ಟನ್ನೂರಿನಲ್ಲಿ ಸಿಪಿಎಂ ಕಾರ್ಯಕರ್ತರಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ನೆಲ್ಲೂನ್ನಿಯ ಪಿವಿ ಸಚಿನ್(24), ಮಟ್ಟನ್ನೂರಿನ ಕೆವಿ ಸುಜಿ(21), ನಿರ್ವೇಲಿ ಎಂಬಲ್ಲಿನ ಪಿವಿ ವಿಜಿತ್(20) ಬಂಧಿತ ಆರೋಪಿಗಳಾಗಿದ್ದು, ಇವರು ಘರ್ಷಣೆಯ ವೇಳೆ ಗಾಯಗೊಂಡು ತಲಶ್ಶೇರಿಯ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ತನಿಖಾಧಿಕಾರಿಗಳು ಇವರನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಒಂಬತ್ತು ಮಂದಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ರವಿವಾರ ಸಂಜೆ ಮಟ್ಟನ್ನೂರ್-ಇರಿಟ್ಟಿ ರಸ್ತೆಯ ಹಳೆಯ ಮದ್ಯದಂಗಡಿ ಸಮೀಪ ಸಿಪಿಎಂ ಕಾರ್ಯಕರ್ತರ ಕಾರನ್ನು ಅಡ್ಡಗಟ್ಟಿದ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ತಲವಾರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರಿನಲ್ಲಿದ್ದ ಸಿಪಿಎಂ ಕಾರ್ಯಕರ್ತರಾದ ಪಿ.ಲನೀಶ್(32), ಪಿ. ಲತೀಶ್(28), ಟಿ.ಆರ್. ಸಾಯುಶ್(34) ಎನ್. ಶರತ್ (28) ಗಾಯಗೊಂಡಿದ್ದು, ಇವರನ್ನು ಕಲ್ಲಿಕೋಟೆ ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಗಾಯಾಳುಗಳು ಕಣ್ಣೂರಿನ ಎ.ಕೆ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಗಳುಗಳ ದೂರಿನಾಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಪಿಎಂ ಕಾರ್ಯಕರ್ತರಿಗೆ ಇರಿದ ದುಷ್ಕರ್ಮಿಗಳಲ್ಲಿ ನಾಲ್ವರು ಒಂದು ಬೈಕ್‍ನಲ್ಲಿ ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಆಧಾರದಲ್ಲಿ ಪೊಲೀರು ಆರೋಪಿಗಳಲ್ಲಿ ಮೂರು ಮಂದಿಯನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







