ದಾವಣಗೆರೆ: ನಿಧಿ ಆಸೆ ತೋರಿಸಿ ಮೋಸ; ಆರೋಪಿಗಳ ಬಂಧನ

ದಾವಣಗೆರೆ,ಜು.03: ನಿಧಿ ಆಸೆ ತೋರಿಸಿ 12 ಲಕ್ಷ ಹಣ ಪಡೆದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿ, ಅವರಿಂದ 10.18 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಚಿಕ್ಕಕುರುಬರ ಹಳ್ಳಿಯ ವೆಂಕಟೇಶ್, ಚಿಕ್ಕಬೆನ್ನೂರು ಗ್ರಾಮದ ಮಂಜಪ್ಪ ಬಂಧಿತ ಆರೋಪಿಗಳು.
ಘಟನೆ ವಿವರ: 2017ರಲ್ಲಿ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ಸಿ.ರಾಜಕುಮಾರ ಎಂಬುವರಿಗೆ ಕರೆ ಮಾಡಿ ನಿಧಿ ಸಿಕ್ಕಿದೆ ಎಂದು ನಂಬಿಸಿದ್ದರು. ನಂತರ ಅಕ್ಟೋಬರ್ ತಿಂಗಳಲ್ಲಿ ಶಿವಮೊಗ್ಗ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಹತ್ತಿರ ಕರೆಸಿಕೊಂಡು ಅಲ್ಲಿಂದ ಕಾರಿನಲ್ಲಿ ನ್ಯಾಮತಿ ತಾಲೂಕು, ಚೀಲೂರು ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಕರೆಸಿ ಅವರಿಗೆ ನಕಲಿ ಬಂಗಾರವನ್ನು ಕೊಟ್ಟು ಅವರಿಂದ 12,50,000/- ರೂಗಳನ್ನು ಪಡೆದು ಮೋಸ ಮಾಡಿದ್ದರು. ಈ ಸಂಬಂಧ ಸಿ.ರಾಜಕುಮಾರ ಅವರು ದೂರು ದಾಖಲಿಸಿದ್ದರು.
ಈ ಪ್ರಕರಣದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹೊನ್ನಾಳಿ, ನ್ಯಾಮತಿ ಪೊಲೀಸರ ಕಾರ್ಯವನ್ನು ಎಸ್ಪಿ ಆರ್.ಚೇತನ್ ಶ್ಲಾಘಿಸಿದ್ದಾರೆ.





