ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ 27 ಲಕ್ಷ ರೂ. ವಂಚನೆ; ದೂರು

ಮಂಗಳೂರು, ಜು.3: ಮೂಡುಬಿದಿರೆ ಮಾರ್ಪಾಡಿ ಗ್ರಾಮದ ಅಪಾರ್ಟ್‌ಮೆಂಟ್‌ನ ಮನೆಯೊಂದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ವೊಂದರಿಂದ 27 ಲಕ್ಷ ರೂ. ವಂಚಿಸಿದ ಬಗ್ಗೆ ಎಕನಾಮಿಕ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗಳನ್ನು ಎಚ್. ಶ್ರೀನಿವಾಸ ಶೆಣೈ ಮತ್ತು ಶೋಭಾ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೂಡುಬಿದಿರೆ ಮಾರ್ಪಾಡಿ ಗ್ರಾಮದ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಎಚ್. ಶ್ರೀನಿವಾಸ ಶೆಣೈ 1,150 ಚದರಡಿ ಮನೆಯನ್ನು ಹೊಂದಿದ್ದು, ಆ ಮನೆಯನ್ನು ಶೋಭಾ ಖರೀದಿಸಲು ಮುಂದಾಗಿದ್ದರು. ಈ ವೇಳೆ ಇಬ್ಬರು ಆರೋಪಿಗಳು ಸೇರಿ ಮನೆಯ ದಾಖಲಾತಿಗಳು ಕಳೆದು ಹೋಗಿರುವುದಾಗಿ ನಂಬಿಸಿ, ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ಹೇಳಲಾಗಿದೆ.
2017ರ ನವೆಂಬರ್ ತಿಂಗಳ ಕೊನೆಯಲ್ಲಿ ಇಬ್ಬರೂ ಆರೋಪಿಗಳು ಸೇರಿ, ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿನ ಯೂನಿಯನ್ ಬ್ಯಾಂಕ್‌ಗೆ ತೆರಳಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ನಡೆದು, ಸಾಲವನ್ನು ಮಂಜೂರು ಮಾಡಿ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಸಿಟಿ ಮ್ಯಾನೇಜರ್ ರಮೇಶ್ ನಾಯ್ಕ ಅವರಿಗೆ ದಾಖಲಾತಿಗಳನ್ನು ಕಳುಹಿಸಿಕೊಡಲಾಗಿತ್ತು. ಅದರಂತೆ ಮ್ಯಾನೇಜರ್ ಎರಡನೇ ಆರೋಪಿಯ ಲೋನ್ ಖಾತೆ ತೆರೆದು ಸೆಕ್ಯುರಿಟಿ ದಾಖಲಾತಿ ಪಡೆದು 27 ಲಕ್ಷ ರೂ. ಮಂಜೂರು ಮಾಡಿದ್ದರು.
ಬಳಿಕ ಮಂಜೂರು ಮಾಡಿದ ಹಣವನ್ನು 2017ರ ಡಿಸೆಂಬರ್ 7ರಂದು ಆರೋಪಿ ಮೂಡುಬಿದಿರೆಯ ಎಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾನೆ. ಬಳಿಕ 2018ರ ಮೇ 16ರಂದು ಆಂಗ್ಲ ದಿನಪತ್ರಿಕೆಯೊಂದರಲ್ಲಿ ಮಾರ್ಪಾಡಿ ಗ್ರಾಮದ ಮನೆಯನ್ನು ಹರಾಜು ಮಾಡಲು ಪ್ರಕಟನೆ ಹೊರಡಿಸಿರುವುದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಟಿ ಮ್ಯಾನೇಜರ್ ರಮೇಶ್ ನಾಯ್ಕ ಅವರ ಗಮನಕ್ಕೆ ಬಂದಿದೆ.
ನಂತರ ಪರಿಶೀಲನೆ ಮಾಡಿದಾಗ ಆರೋಪಿಗಳಿಬ್ಬರು ಮನೆಯ ನಕಲಿ ದಾಖಲೆ ಸೃಷ್ಟಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚಿಸಿ, ಮೋಸ ಮಾಡಿರುವುದಾಗಿ ದೂರು ನೀಡಲಾಗಿದೆ.
ಈ ಕುರಿತು ಎಕನಾಮಿಕ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







