ಮಡಿಕೇರಿ: ಮೀನುಕೊಲ್ಲಿ ವ್ಯಾಪ್ತಿಯಲ್ಲಿ ಆತಂಕ ಮೂಡಿಸಿದ ಹುಲಿ; ಅರಣ್ಯ ಇಲಾಖೆ ಕಟ್ಟೆಚ್ಚರ

ಮಡಿಕೇರಿ, ಜು.3: ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ಹುಲಿಯೊಂದು ಕಾಡಿನ ಪ್ರಾಣಿಯನ್ನು ಬೇಟೆಯಾಡಲು ಸಾಧ್ಯವಾಗದೆ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಗೋವುಗಳನ್ನು ಬೇಟೆಯಾಡುತ್ತಿದೆ.
ಹತ್ತು ದಿನಗಳ ಹಿಂದೆ ಮೀನುಕೊಲ್ಲಿ ರಕ್ಷಿತಾರಣ್ಯದ ಪಕ್ಕದಲ್ಲಿರುವ ಪೊನ್ನತ್ಮೊಟ್ಟೆ ನಿವಾಸಿ ರಾಬರ್ಟ್ ಎಂಬವರ ಹಸುವೊಂದನ್ನು ನೀರು ಕುಡಿಯಲು ಹೋದಾಗ ಬಲಿ ತೆಗೆದುಕೊಂಡ ಹುಲಿರಾಯ, ಎರಡು ದಿನಗಳ ಹಿಂದೆ ಚಿಕ್ಲಿಹೊಳೆಯ ಸಂಪರ್ಕ ರಸ್ತೆಯಲ್ಲಿ ಮೇಯುತ್ತಿದ್ದ ನಾಗರಾಜ್ ಎಂಬುವವರ ಹಸುವೊಂದನ್ನು ಬಲಿ ತೆಗೆದುಕೊಂಡಿದೆ.
ಇದೀಗ ಕಂಬಿಬಾಣೆ ಮತ್ತು ರಂಗಸಮುದ್ರ ಸಂಪರ್ಕ ರಸ್ತೆ ಬದಿಯಲ್ಲಿ ಹುಲಿ ಓಡಾಡುತ್ತಿರುವ ದೃಶ್ಯ ಅರಣ್ಯ ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ.
ಡಿ.ಎಫ್.ಒ ಮತ್ತು ಆರ್.ಎಫ್.ಒ ಮಾರ್ಗದರ್ಶನದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿ ಸೆರೆಗೆ ಶ್ರಮ ವಹಿಸುತ್ತಿದೆ. ಗ್ರಾಮದಲ್ಲಿ ಭೀತಿಯ ವಾತಾವರಣ ಮುಂದುವರೆದಿದ್ದು, ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.







