ವದಂತಿಗಳಿಂದ ನಡೆಯುವ ಗುಂಪು ಹತ್ಯೆಯಿಂದ ಆಘಾತ: ಸರಕಾರದ ಪತ್ರಕ್ಕೆ ವಾಟ್ಸ್ಆ್ಯಪ್ ಪ್ರತಿಕ್ರಿಯೆ

ಹೊಸದಿಲ್ಲಿ, ಜು. 4: ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಪಸರಿಸಲಾಗುವ ವದಂತಿಗಳಿಂದ ಹಿಂಸಾ ಘಟನೆಗಳು ನಡೆಯುತ್ತಿವೆ ಎಂದು ಸರಕಾರ ವಾಟ್ಸ್ಆ್ಯಪ್ಗೆ ಬರೆದ ಪತ್ರಕ್ಕೆ ಪ್ರತಿಕ್ರಿಯಿರಿಸಿರುವ ಸಂಸ್ಥೆ ತಾನು ಈ ಸಮಸ್ಯೆ ನಿಭಾಯಿಸಲು ಎರಡು ಹಂತದ ಕ್ರಮಗಳನ್ನು ಕೈಗೊಂಡಿದ್ದಾಗಿ ವಿವರಿಸಿದೆ.
‘‘ಭಾರತ ಸರಕಾರದಂತೆ ನಾವು ಕೂಡ ಈ ಹಿಂಸಾ ಕೃತ್ಯಗಳಿಗೆ ದಂಗಾಗಿದ್ದೇವೆ ಹಾಗೂ ಎತ್ತಲಾಗಿರುವ ಕೆಲವೊಂದು ಪ್ರಮುಖ ವಿಚಾರಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಇಚ್ಛಿಸುತ್ತೇವೆ. ಈ ಸರಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಕಂಪೆನಿಗಳು ಜತೆಯಾಗಿ ಈ ಸವಾಲನ್ನು ಎದುರಿಸಬೇಕೆಂದು ನಾವು ನಂಬಿದ್ದೇವೆ’’ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ವಾಟ್ಸ್ಆ್ಯಪ್ ತಿಳಿಸಿದೆ.
‘‘ವಾಟ್ಸ್ಆ್ಯಪ್ ನಲ್ಲಿ ಯಾರನ್ನು ಬೇಕಾದರೂ ಒಂದೇ ಟ್ಯಾಪ್ ಮೂಲಕ ಬ್ಲಾಕ್ ಮಾಡಬಹುದಾಗಿದೆ. ಇತ್ತೀಚೆಗೆ ನಾವು ಗ್ರೂಪ್ ಚ್ಯಾಟ್ ಗಳಿಗೆ ಹಲವಾರು ಬದಲಾವಣೆ ತಂದಿದ್ದು, ಅನಗತ್ಯ ಮಾಹಿತಿ ಪಸರಿಸದಂತೆ ತಡೆಯುವುದು ಇದರ ಉದ್ದೇಶ. ನೀವು ಎತ್ತಿರುವ ಕೆಲವೊಂದು ವಿಚಾರಗಳಿಗೆ ಇದು ಪರಿಹಾರವಾಗಬಹುದೆಂದು ನಾವು ನಂಬಿದ್ದೇವೆ, ಗ್ರೂಪ್ ಒಂದನ್ನು ಬಿಟ್ಟು ಹೋದವರನ್ನು ಇತರರು ಮತ್ತೆ ಗ್ರೂಪ್ ಗೆ ಸೇರಿಸುವುದನ್ನು ಅದು ತಡೆಯುತ್ತದೆ. ಗ್ರೂಪ್ ನೊಳಗೆ ಯಾರು ಸಂದೇಶಗಳನ್ನು ಕಳುಹಿಸಬಹುದೆಂಬುದನ್ನು ನಿಯಂತ್ರಿಸುವ ಅಧಿಕಾರವನ್ನು ಅಡ್ಮಿನ್ ಗಳಿಗೆ ನೀಡುವ ಹೊಸ ಸೆಟ್ಟಿಂಗ್ ಅನ್ನೂ ಬಿಡುಗಡೆಗೊಳಿಸಲಾಗಿದೆ. ಅನಗತ್ಯ ಸಂದೇಶಗಳು ಹಾಗೂ ಫಾರ್ವರ್ಡ್ ಮೆಸೇಜ್ ಗಳು ಪಸರಿಸದಂತೆ ಇದು ನಿಯಂತ್ರಿಸುತ್ತದೆ’’ ಎಂದು ವಾಟ್ಸ್ಆ್ಯಪ್ ತನ್ನ ಇಮೇಲ್ ಪತ್ರದಲ್ಲಿ ತಿಳಿಸಿದೆ.
ವಾಟ್ಸ್ಆ್ಯಪ್ ಭಾರತದಲ್ಲಿ ಹೊಸ ಲೇಬಲ್ ಆರಂಭಿಸಲು ನಿರ್ಧರಿಸಿದ್ದು ಫಾವರ್ಡ್ ಮಾಡಲಾದ ಸಂದೇಶಗಳು ಹಾಗೂ ಕಳುಹಿಸಿದಾತನೇ ಬರೆದ ಸಂದೇಶಗಳನ್ನು ಅದು ಬೊಟ್ಟು ಮಾಡಿ ತೋರಿಸುತ್ತದೆ. ತಪ್ಪು ಮಾಹಿತಿ ಪಸರಿಸದಂತೆ ತಡೆಯಲು ಭಾರತದ ಪ್ರಮುಖ ಶೈಕ್ಷಣಿಕ ತಜ್ಞರೊಡನೆ ಜತೆಯಾಗಿ ಕೆಲಸ ಮಾಡುವ ಉದ್ದೇಶವೂ ತನಗಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಜುಲೈ 2ರಂದು ಭಾರತ ಸರಕಾರ ವಾಟ್ಸ್ಆ್ಯಪ್ ಗೆ ಪತ್ರ ಬರೆದು ಬೇಜವಾಬ್ದಾರಿಯ ಹಾಗೂ ಸ್ಫೋಟಕ ಸಂದೇಶಗಳನ್ನು ತಡೆಯುವ ತುರ್ತು ಅಗತ್ಯವನ್ನು ಒತ್ತಿ ಹೇಳಿತ್ತು.







