ಶಿಕ್ಷಕರಿಗೆ ಕೈತೋಟ ನಿರ್ಮಾಣ ಮಾಹಿತಿ ಕಾರ್ಯಾಗಾರ
ದ.ಕ.: ಸಾವಿರ ಶಾಲೆಗಳಲ್ಲಿ ಅಕ್ಷರ ಕೈತೋಟ
ಮಂಗಳೂರು, ಜು.4: ಕೇಂದ್ರ ಸರಕಾರದ ನರೇಗಾ ಯೋಜನೆಯಡಿ ದ.ಕ. ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅಕ್ಷರ ಕೈತೋಟ ನಿರ್ಮಾಣಕ್ಕೆ ಸಂಬಂಧಿಸಿ ಇಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳೂರು ತಾಲೂಕಿನ ಶಾಲೆಗಳ ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಕರಿಬೇವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಇಂದು ನೀರಿಗಾಗಿ ಪರಿತಪಿಸುತ್ತಿರುವಂತೆಯೇ ಮುಂದೊಂದು ದಿನ ಆಮ್ಲಜನಕ್ಕಾಗಿ ಪರಿತಪಿಸುವ ಸಂದರ್ಭ ಎದುರಾಗಬಹುದು. ಆದ್ದರಿಂದ ಗಿಡಮರಗಳನ್ನು ಬೆಳೆಸುವ ಪರಿಪಾಠವನ್ನು ಶಾಲೆಗಳಲ್ಲಿ ಬೆಳೆಸುವ ಮೂಲಕ ಉತ್ತಮ ಕಾರ್ಯಕ್ರಮವನ್ನು ರೂಪಿಸಲು ಸಾಧ್ಯ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಹಲವು ಶಾಲೆಗಳಲ್ಲಿ ಸ್ಥಳೀಯರು ಹಾಗೂ ಎಸ್‌ಡಿಎಂಸಿಗಳ ನೆರವಿನಲ್ಲಿ ತರಕಾರಿಗಳನ್ನು ಬೆಳೆಸುವ ಕಾರ್ಯಕ್ರಮ ನಡೆಯುತ್ತಿದ್ದು, ಇತರ ಜಿಲ್ಲೆಗಳಿಗೂ ಇದು ಮಾರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಮುಖ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ ಅಕ್ಷರ ಕೈತೆಟದ ಕುರಿತಂತೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ್, ಸದಸ್ಯರಾದ ಮಂಜುಳಾ ಮಾಧವ ಮಾವೆ, ಜನಾರ್ದನ ಗೌಡ, ಮೀನುಗಾರಿಕಾ ಕಾಲೇಜಿನ ಶಿವಕುಮಾರ್ ಮಗದ, ಅಧಿಕಾರಿಗಳಾದ ಎಚ್.ಆರ್. ನಾಯಕ್, ಸದಾನಂದ, ರಾಜಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು. ಡಿಡಿಪಿಐ ಶಿವರಾಮಯ್ಯ ಸ್ವಾಗತಿಸಿದರು.







