ನರೇಗಾದಡಿ ಸಾವಿರ ಶಾಲೆಗಳಲ್ಲಿ ತರಕಾರಿ, ಹಣ್ಣುಹಂಪಲು, ಜೈವಿಕ ಬೇಲಿ ನಿರ್ಮಾಣಕ್ಕೂ ಚಿಂತನೆ

ಮಂಗಳೂರು, ಜು.4: ಕೇಂದ್ರ ಸರಕಾರದ ನರೇಗಾ ಯೋಜನೆಯಡಿ ದ.ಕ. ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಅಕ್ಷರ ಕೈತೋಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುನ್ನುಡಿ ಹಾಕಿದೆ.
ಈಗಾಗಲೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 407 ಶಾಲೆಗಳಲ್ಲಿ ಸ್ಥಳೀಯರು, ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಸಹಭಾಗಿತ್ವದಲ್ಲಿ ತರಕಾರಿ ಬೆಳೆಯುವ ಪರಿಪಾಠ ಆರಂಭಗೊಂಡಿದೆ. ಇದೀಗ ಪ್ರಸಕ್ತ ಸಾಲಿನಿಂದ ನರೇಗಾದ ಸಂಯೋಜನೆಯೊಂದಿಗೆ ಶಾಲೆಗಳಲ್ಲಿ ಅಕ್ಷರ ಕೈತೋಟ ನಿರ್ಮಾಣವಾಗಲಿದೆ.
ಜಿಲ್ಲೆಯಲ್ಲಿ 1423 ಪ್ರಾಥಮಿಕ ಶಾಲೆಗಳಿದ್ದು, ಇದರಲ್ಲಿ 942 ಗ್ರಾ.ಪಂ. ವ್ಯಾಪ್ತಿಯ ಶಾಲೆಗಳು ನೇರವಾಗಿ ನರೇಗಾ ಯೋಜನೆಗೊಳಪಡಲಿವೆ. ಆಯಾ ಗ್ರಾ.ಪಂ.ಗಳ ನೇತೃತ್ವ ಹಾಗೂ ತೋಟಗಾರಿಕಾ ಇಲಾಖೆಯ ತಾಂತ್ರಿಕ ಒಗ್ಗೂಡುವಿಕೆಯೊಂದಿಗೆ ಈ ಅಕ್ಷರ ಕೈತೋಟ ನಿರ್ಮಾಣವಾಗಲಿದೆ. ಉದ್ಯೋಗ ಚೀಟಿ ಹೊಂದಿರುವವರನ್ನು ಈ ಅಕ್ಷರ ಕೈತೋಟಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 730 ಶಾಲೆಗಳಲ್ಲಿ ತಲಾ 1 ಎಕರೆಯಂತೆ ಭೂಮಿ ಲಭ್ಯವಿದೆ. ಪ್ರಸಕ್ತ ಸಾಲಿನಲ್ಲಿ 107 ಎಕರೆಯನ್ನು ಈ ಕೈತೋಟ ನಿರ್ಮಾಣಕ್ಕಾಗಿ ಮೀಸಲಿಡಲಾಗುವುದು. ಅದಕ್ಕಾಗಿ 5 ಕೋಟಿ ರೂ. ನರೇಗಾದಡಿ ಹಣ ವಿನಿಯೋಗಿಸಲು ಚಿಂತಿಸಲಾಗಿದೆ. ಇದರಿಂದ 1 ಲಕ್ಷ 40,000 ಮಾನವ ದಿನಗಳ ಮೂಲಕ 3800 ಕುಟುಂಬಗಳಿಗೆ ಉದ್ಯೋಗ ಒದಗಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಹೇಳಿದ್ದಾರೆ.
ಶಾಲೆಗಳಲ್ಲಿ ನೆಡಲಾಗುವ ಗಿಡಗಳಿಗೆ ಮಕ್ಕಳ ಹೆಸರನ್ನು ಇಡುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಬೆಳೆಸಲು ಕೂಡಾ ಈ ಯೋಜನೆ ಪೂರಕವಾಗಲಿದೆ. ನರೇಗಾ ಯೋಜನೆಯಡಿ ಸದ್ಯ ನುಗ್ಗೆಕಾಯಿ, ನಿಬೆ, ನೆಲ್ಲಿಕಾಯಿ, ಬಾಳೆ, ಪಪ್ಪಾಯಿ, ಮಾವು, ಸಪೋಟಾ ಬೆಳೆಯಲು ಅವಕಾಶವಿದೆ. ತರಕಾರಿ, ಸೊಪ್ಪುಗಳನ್ನು ಕೂಡಾ ಇದರ ಜತೆಯಾಗಿ ಬೆಳೆಸುವ ಕೆಲಸ ಮಾಡಲಾಗುವುದು.
ನಗರ ಪ್ರದೇಶದಲ್ಲಿ 146 ಶಾಲೆಗಳಲ್ಲಿ ಜಾಗದ ಕೊರತೆ ಇದೆ. ಅಂತಹ ಶಾಲೆಗಳಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಪಾಲಿಥಿನ್ ಬ್ಯಾಗ್‌ಗಳಲ್ಲಿ ಕನಿಷ್ಠ 10 ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ಡಾ.ಎಂ.ಆರ್. ರವಿ ಹೇಳಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳಿಗೆ ಆವರಣ ಗೋಡೆಯ ಸೌಲಭ್ಯ ಇರುವದಿಲ್ಲ. ಇಂತಹ ಶಾಲೆಗಳಿಗೆ ಜೈವಿಕ ಬೇಲಿ ನಿರ್ಮಾಣಕ್ಕೂ ಚಿಂತನೆ ಮಾಡಲಾಗಿದೆ. ಜೈವಿಕ ಬೇಲಿಯಲ್ಲಿ ಜತ್ರೋಪಾ, ಹೊನ್ನೆ ಗಿಡಗಳನ್ನು ಬೆಳೆಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ. ತೋಟಗಾರಿಕಾ ಇಲಾಖೆಯಲ್ಲಿ 40,000 ಸಾಗುವಾನಿ (ಟೀಕ್‌ವುಡ್) ಮರಗಳು ಲಭ್ಯವಿದ್ದು, ಅದನ್ನು ಬೆಳೆಸಿದ್ದಲ್ಲಿ ಶಾಲೆಗಳಲ್ಲಿ ಆದಾಯವಾಗಿಯೂ ಪರಿವರ್ತಿಸಲು ಸಾಧ್ಯತೆ ಇದೆ ಎಂದು ಡಾ.ಎಂ. ಆರ್. ರವಿ ಜಿಲ್ಲಾ ಪಂಚಾಯತ್‌ನಲ್ಲಿ ಇಂದು ನಡೆದ ಅಕ್ಷರ ಕೈತೋಟ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಜತೆಗೆ ಉದ್ಯೋಗ ಸೃಷ್ಟಿ
ಮೌನಕ್ರಾಂತಿಯಾಗಿ ಕಳೆದ ವರ್ಷ 407 ಶಾಲೆಗಳಲ್ಲಿ ಎಸ್‌ಡಿಎಂಸಿಗಳ ಸಹಯೋಗದಲ್ಲಿ ತರಕಾರಿ ತೋಟದ ಮೂಲಕ ಬಿಸಿಯೂಟಕ್ಕೆ ಪೌಷ್ಠಿಕ ಆಹಾರವಾಗಿ ತರಕಾರಿ ಬಳಸಲು ಸಾಧ್ಯವಾಗಿದೆ. ಮಾತ್ರವಲ್ಲದೆ ಕೆಲ ಶಾಲೆಗಳಲ್ಲಿ ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಒದಗಿಸಿ ಅದರಿಂದ ಶಾಲೆಯ ಸಂಪನ್ಮೂಲ ವೃದ್ದಿಗೂ ನೆರವಾಗಿದೆ. ಮಕ್ಕಳಿಗೆ ಕೃಷಿ ಜ್ಞಾನವನ್ನು ಒದಗಿಸುವುದು, ಸಾವಯವ ಕೃಷಿ ಬಗ್ಗೆ ಆಸಕ್ತಿ ಬೆಳೆಸುವ ಜತೆಗೆ ಉದ್ಯೋಗ ಸೃಷ್ಟಿಯೂ ಈ ಯೋಜನೆಯ ಪ್ರಮುಖ ಉದ್ದೇಶ.
-ಡಾ.ಎಂ.ಆರ್. ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.







