ಚಿಕ್ಕಮಗಳೂರು: ಶ್ರೀ ಅನ್ನಪೂರ್ಣ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು, ಜು.4: ದಕ್ಷ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್ಪಿ ಅಣ್ಣಾಮಲೈ ಇಂದು ನಗರದ ಗೌರಿ ಕಾಲುವೆಯಲ್ಲಿರುವ ಶ್ರೀ ಅನ್ನಪೂರ್ಣ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವೃದ್ಧರ ಜೊತೆ ಅಲ್ಪ ಸಮಯ ಕಳೆದು, ಮಾತುಕತೆ ನಡೆಸಿದರು.
ಆಶ್ರಮದ ವೃದ್ಧರ ಮನದ ಬಯಕೆಯ ಮಾಹಿತಿ ತಿಳಿದ ಎಸ್ಪಿ ಅಣ್ಣಾಮಲೈ ಮಂಗಳವಾರ ಸಂಜೆ ವೃದ್ಧಾಶ್ರಮಕ್ಕೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಎಲ್ಲ ವೃದ್ಧರನ್ನು ಪ್ರತ್ಯೇಕವಾಗಿ ಮಾತನಾಡಿಸಿದ ಎಸ್ಪಿ ಅಣ್ಣಾಮಲೈ ಬಳಿ ವೃದ್ಧರು ತಮ್ಮ ಮನದಲ್ಲಿದ್ದ ನೋವುಗಳನ್ನು ಬಿಚ್ಚಿಟ್ಟರು. ಈ ವೇಳೆ ಎಸ್ಪಿ ಕೂಡ ಭಾವುಕರಾದಂತೆ ಕಂಡು ಬಂದರು.
ಈ ವೇಳೆ ವೃದ್ಧರೊರ್ವರು ಎಸ್ಪಿ ಬಳಿ ತಮ್ಮ ಅಳಲು ತೋಡಿಕೊಂಡು, ನನ್ನ ಮಗ ಹಿಂಸೆಕೊಟ್ಟು ಮನೆಯಿಂದ ಹೊರಹಾಕಿದ್ದಾನೆ. ಮನೆಯಲ್ಲಿದ್ದ ನನ್ನ ರೂಮ್ ಅನ್ನು ನನಗೆ ತಿಳಿಯದ ಹಾಗೆ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆಂದು ಹೇಳಿ ಭಾವುಕರಾದರು.
ಮತ್ತೋರ್ವ ವೃದ್ಧರೊಬ್ಬರು, ಸಾರ್ ನೀವು ಬರುವ ಸುದ್ದಿ ಹೇಗೋ ತಿಳಿಯಿತು, ಇದರಿಂದ ಖುಷಿಯಾಗಿ ನಿಮಗೆಂದೇ ಕಿತ್ತಳೆ ಹಣ್ಣು ತಂದಿದ್ದೇನೆ. ಸಾರ್ ತಗೆದುಕೊಳ್ಳಿ ಎಂದು ಎಸ್ಪಿ ಅಣ್ಣಾಮಲೈಗೆ ನೀಡಿದರು. ಹಣ್ಣು ಪಡೆದುಕೊಂಡ ಎಸ್‍ಪಿ ಅಣ್ಣಾಮಲೈ ಈ ಹಣ್ಣನ್ನು ನನ್ನ ಮಗನಿಗೆ ನೀಡುತ್ತೇನೆಂದು ಹೇಳಿದರು. ವೃದ್ಧರ ಸಮಸ್ಯೆಗಳನ್ನು ಆಲಿಸಿದ ಅಣ್ಣಾಮಲೈ ವೃದ್ಧರ ಸಮಸ್ಯೆಗಳಿಗೆ ಸ್ಪಂಧಿಸುವ ಭರವಸೆ ನೀಡಿದರು.