'ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆ ಮಾರ್ಗಸೂಚಿಯಲ್ಲಿ ಬದಲಾವಣೆ'
ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಕುರ್ಡೆಕರ್

ಉಡುಪಿ, ಜು.4: ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಲು ಇರುವ ಮಾರ್ಗಸೂಚಿಯಲ್ಲಿ ಸರಕಾರ ಕೆಲ ಬದಲಾವಣೆಗಳನ್ನು ಮಾಡಿದ್ದು, ಅದರಂತೆ ಶೇಕಡವಾರು ನಷ್ಟಕ್ಕೆ ಅನುಗುಣ ವಾಗಿ ಪ್ರತಿ ಮನೆಗಳಿಗೆ ಪರಿಹಾರವನ್ನು ಇನ್ನು ಕೆಲವೇ ದಿನಗಳಲ್ಲಿ ವಿತರಿಸಲಾ ಗುವುದು ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಧೀರ್ ಕುಮಾರ್ ಶೆಟ್ಟಿ, ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿವೆ. ಇದರಲ್ಲಿ ಜಾಸ್ತಿ ಹಾನಿ ಯಾದ ಹಾಗೂ ಕಡಿಮೆ ಹಾನಿಯಾಗಿರುವ ಮನೆಗಳಿಗೆ ಸಮಾನ ಪರಿಹಾರ ಮೊತ್ತವನ್ನು ನೀಡಲಾಗಿದೆ. ಇದು ಯಾವ ಆಧಾರದಲ್ಲಿ ಮಾಡಿದ್ದು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ಪ್ರಾಕೃತಿಕ ವಿಕೋಪದಲ್ಲಿ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಪಾಲಿಸ ಬೇಕಾಗುತ್ತದೆ. ಈವರೆಗೆ ಶೇ.15ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ 5,200 ರೂ. ಹಾಗೂ ಪೂರ್ಣ ಹಾನಿಯಾದ ಮನೆಗಳಿಗೆ 95 ಸಾವಿರ ರೂ. ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಈ ಮಧ್ಯೆ ಹಾನಿಯಾದ ಮನೆಗಳಿಗೆ ಎಷ್ಟು ಪರಿಹಾರ ನೀಡಬೇಕೆಂಬುದು ಮಾರ್ಗಸೂಚಿಯಲ್ಲಿ ಇರಲಿಲ್ಲ. ಹೀಗಾಗಿ ಎಲ್ಲರಿಗೂ 5,200 ರೂ. ಪರಿಹಾರ ನೀಡಲಾಗುತ್ತಿತ್ತು ಎಂದರು.
ಇದೀಗ ರಾಜ್ಯ ಸರಕಾರವು ಈ ಮಾರ್ಗಸೂಚಿಯನ್ನು ಬದಲಾಯಿಸಿ ಶೇಕಡ ವಾರು ಹಾನಿಯಾದ ಮನೆಗಳಿಗೆ ಪರಿಹಾರದ ಮೊತ್ತವನ್ನು ನಿಗದಿಪಡಿಸಿದೆ. ಅದರಂತೆ ಈಗಾಗಲೇ 5,200ರೂ. ಪರಿಹಾರ ನೀಡಿರುವ ಮನೆಗಳ ಕುರಿತು ಇನ್ನು ಕೆಲವೇ ದಿನಗಳಲ್ಲಿ ಮರು ಸರ್ವೆ ನಡೆಸಿ ಹೆಚ್ಚಿನ ಪರಿಹಾರ ನೀಡಲಾಗು ವುದು. ನಮ್ಮಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ. ಈಗಾಗಲೇ ಖಾತೆಯಲ್ಲಿ ಹಣ ಇದೆ ಎಂದು ಅವರು ಹೇಳಿದರು.
ಅಧ್ಯಕ್ಷರ ವಿರುದ್ಧ ಅಸಮಾಧಾನ: ಸಾಮಾನ್ಯ ಸಭೆಗೆ ಮುನ್ನ ಸದಸ್ಯರು ಸಲ್ಲಿಸುವ ಲಿಖಿತ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಸಿದ್ಧ ಪಡಿಸಿಕೊಳ್ಳದ ಅಧ್ಯಕ್ಷರ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯೆ ಡಾ.ಸುನೀತಾ ಶೆಟ್ಟಿ ಮಾತನಾಡಿ, ಸಭೆಯಲ್ಲಿ ಅಧಿಕಾರಿಗಳು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬ ಕಾರಣಕ್ಕೆ ನಾವು ಸಭೆಗೆ ಕೆಲವು ದಿನಗಳ ಮೊದಲೇ ಪ್ರಶ್ನೆಗಳನ್ನು ಅಧ್ಯಕ್ಷರಿಗೆ ನೀಡುತ್ತಿದ್ದೇವೆ. ಅಧ್ಯಕ್ಷರು ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಉತ್ತರ ಸಿದ್ದಪಡಿಸಿಕೊಳ್ಳಬೇಕು. ಇದಕ್ಕೆ ಸಭೆಯಲ್ಲಿ ಅಧಿಕಾರಿಗಳು ಉತ್ತರ ನೀಡಬೇಕು. ಆದರೆ ಇಲ್ಲಿ ಅಧ್ಯಕ್ಷರು ಸದಸ್ಯರ ಪ್ರಶ್ನೆ ಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಸಭೆಯಲ್ಲೇ ಓದಿ ಹೇಳುತ್ತಿರುವುದು ಸರಿ ಯಲ್ಲ. ಇದರಿಂದ ನಮಗೆ ಸರಿಯಾದ ಉತ್ತರ ಸಿಗುವುದಿಲ್ಲ. ಈ ವ್ಯವಸ್ಥೆ ಬದಲಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾರಾಡಿ ಗ್ರಾಪಂ ವ್ಯಾಪ್ತಿಯ ಅನಧಿಕೃತ ಮನೆಯೊಂದಕ್ಕೆ ಅಕ್ರಮವಾಗಿ ಪಂಡಿತ್ ದೀನ್ ದಯಾಳ್ ವಿದ್ಯುದೀಕರಣ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಬಗ್ಗೆ ಸದಸ್ಯೆ ವಸಂತಿ ಪೂಜಾರ್ತಿ ಸಭೆಯಲ್ಲಿ ದೂರಿದರು. ಮೆಸ್ಕಾಂ ಅಧಿಕಾರಿಗಳು ಪಂಚಾಯತ್ ಗಮನಕ್ಕೆ ತಂದು ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ ಅಕ್ರಮ ಕಂಡು ಬಂದರೆ ಈ ಮನೆಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಕಾಡೂರು ಅಂಗನವಾಡಿ ವಿವಾದ: ಕಾಡೂರು ಶಾಲೆಯಲ್ಲಿ ನಡೆಯು ತ್ತಿದ್ದ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ವರ್ಗಾಯಿಸಿರುವುದಕ್ಕಾಗಿ ಸ್ಥಳೀಯ ಗ್ರಾಪಂ ಅಧ್ಯಕ್ಷರು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು. ಮಕ್ಕಳ ಕೊರತೆ ಯಿಂದ ಕಾಡೂರು ಶಾಲೆಯಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಲಾಗಿದ್ದು, ಇಲ್ಲಿ ಸೇವೆ ಮಾಡುವ ಕಾರ್ಯಕರ್ತರಿಗೆ ಇನ್ನು ಐದು ವರ್ಷಗಳ ಸೇವಾವಧಿ ಇರುವುದರಿಂದ ಆ ಕೇಂದ್ರವನ್ನು ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯ ಬಾರಾಡಿಯ ಮನೆಯೊಂದರಲ್ಲಿ ಆರಂಭಿಸಿ ಮಾನವೀಯ ನೆಲೆಯಲ್ಲಿ ಅದೇ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಸಭೆಗೆ ಮನದಟ್ಟು ಮಾಡಿದರು.
ಆದರೂ ಕಾಡೂರು ಗ್ರಾಪಂ ಅಧ್ಯಕ್ಷರು ಇದಕ್ಕೆ ಒಪ್ಪಲಿಲ್ಲ. ಈ ವೇಳೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಇಂದು ಸಂಜೆ ದಿನಾಂಕ ನಿಗದಿ ಪಡಿಸಿ ನಾನು, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ, ಸ್ಥಾಯಿ ಸಮಿತಿ ಅಧ್ಯಕ್ಷರು ಅಂಗವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಈ ವೇಳೆ ಶಿಶು ಅಭಿವೃದ್ಧಿ ಅಧಿಕಾರಿಗಳು, ಪೋಷಕರು, ಗ್ರಾಪಂ ಅಧ್ಯಕ್ಷರು ಅಲ್ಲಿ ಹಾಜರು ಇರಬೇಕು ಎಂದರು.
ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಬರುವ 108 ಆಂಬ್ಯುಲೆನ್ಸ್‌ಗಳ ಸಿಬ್ಬಂದಿ ಗಳು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಹಿಂದೇಟು ಹಾಕುತ್ತಾರೆ. ಮೊದಲು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಸಾಧ್ಯವಾಗದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅವರು ಉತ್ತರ ಕೊಡುತ್ತಾರೆ. ಹೀಗಾದರೆ ಗಾಯಾಳುಗಳ ಗತಿ ಏನು ಎಂದು ಡಾ.ಸುನೀತಾ ಶೆಟ್ಟಿ ಪ್ರಶ್ನಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯನಿರ್ವಹಣಾಧಿ ಕಾರಿ ಮೋಹನ್ ರಾಜ್, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ನಾಮ ನಿದೇರ್ಶಿತ ಸದಸ್ಯರುಗಳ ಆಯ್ಕೆ
ಮುಂದಿನ ಅವಧಿಗೆ ಉಡುಪಿ ತಾಪಂನ ನಾಮನಿರ್ದೇಶಿತ ಸದಸ್ಯರುಗಳಾಗಿ ತಾಲೂಕಿನ ಹಾರಾಡಿ, ಮುದರಂಗಡಿ, ಆವರ್ಸೆ, ಉಪ್ಪೂರು, ಕಟಪಾಡಿ, ಕುರ್ಕಾಲು, ಎಲ್ಲೂರು, ಐರೋಡಿ, ಬಾರಕೂರು, ಹಂದಾಡಿ, ಮಜೂರು, ಇನ್ನಂಜೆ(ಪರಿಶಿಷ್ಟ ಜಾತಿ) ಗ್ರಾಪಂಗಳ ಅಧ್ಯಕ್ಷರುಗಳನ್ನು ಚೀಟಿ ಎತ್ತುವ ಮೂಲಕ ಸಭೆಯಲ್ಲಿ ಆರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿ ಯಿಂದ ಹೊಲಿಗೆ ತರಬೇತಿ ಕೇಂದ್ರದಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದ 15 ಮಂದಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಅರ್ಜಿ ಸಲ್ಲಿಸಲು ಅವಕಾಶ
94 ಸಿಸಿಯಲ್ಲಿ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿತ್ತು. ಇದೀಗ ಲಾಗಿನ್ ಮಾಡಲಾಗಿದ್ದು, ಸೆ. 10ರವರೆಗೆ ತಾಲೂಕು ಕಚೇರಿ ಹಾಗೂ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಭೂಪರಿವರ್ತನೆ ಅರ್ಜಿ ಲಾಗಿನ್ ಮಾಡಲಾಗಿದ್ದು, ಪಟ್ಟ ಜಾಗ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಪಡಿತರ ಚೀಟಿಗೆ ಸಂಬಂಧಿಸಿ ಇನ್ನು ಲಾಗಿನ್ ಆಗಿಲ್ಲ. ಜುಲೈಯಲ್ಲಿ ಆಗುತ್ತದೆ ಎಂದು ಮಾಹಿತಿ ಇತ್ತು. ಇದೆಲ್ಲ ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದ್ದಾರೆ.







