"ಲಿಂಗಾಯತ ಧರ್ಮದ ವಿಚಾರಕ್ಕೆ ಬಂದರೆ ಹುಷಾರ್"
ಕಲಾಪದಲ್ಲಿ ‘ವೀರಶೈವ-ಲಿಂಗಾಯತ’ ಜಟಾಪಟಿ

ಬೆಂಗಳೂರು, ಜು. 4: ಲಿಂಗಾಯತ ಮತ್ತು ವೀರಶೈವ ಧರ್ಮದ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಕೆಲಕಾಲ ವಾಕ್ಸಮರ, ಆರೋಪ-ಪ್ರತ್ಯಾರೋಪ, ಏರಿದ ಧ್ವನಿಯಲ್ಲಿ ಪರಸ್ಪರ ಜಟಾಪಟಿ ನಡೆಯಿತು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಬಿಜೆಪಿ ಸದಸ್ಯ ರಾಜಕುಮಾರ್ ಪಾಟೀಲ್, ಲಿಂಗಾಯತ ಸ್ವತಂತ್ರ ಧರ್ಮದ ನೆಪದಲ್ಲಿ ಕೆಲವರು ಧರ್ಮ ಒಡೆಯುವ ಕೆಲಸಕ್ಕೆ ಮುಂದಾಗಿದ್ದರು. ಇದೀಗ ಅವರ ಸ್ಥಿತಿ ಏನಾಗಿದೆ ಎಂದು ಕಾಂಗ್ರೆಸ್ ಸದಸ್ಯರನ್ನು ಮಾತಿನ ಈಟಿಯಿಂದ ತಿವಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಧರ್ಮದ ವಿಚಾರಕ್ಕೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ಎ.ಎಸ್.ಪಾಟೀಲ್ ನಡಹಳ್ಳಿ, ಸಿ.ಸಿ.ಪಾಟೀಲ್ ಹಾಗೂ ರೇಣುಕಾಚಾರ್ಯ ಕೂಡ ಬೆಂಬಲ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ಪ್ರತ್ಯೇಕ ಧರ್ಮದ ಸ್ಥಾನಮಾನ ಸಂಬಂಧ ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಬಿಜೆಪಿ ಸೇರಿ ಮೂರು ಪಕ್ಷದ ಮುಖಂಡರು ಒಟ್ಟಿಗೆ ಸೇರಿ ಮನವಿ ಸಲ್ಲಿಸಿದ್ದರ ಬಗ್ಗೆಯೂ ಗೊತ್ತು. ಅದನ್ನು ಅರಿತುಕೊಂಡು ಮಾತನಾಡಿ ಎಂದು ವಾಗ್ಬಾಣ ಪ್ರಯೋಗಿಸಿದರು.
ಇದರಿಂದ ಆಕ್ರೋಶಿತರಾಗಿ ಮಧ್ಯಪ್ರವೇಶಿಸಿದ ಯತ್ನಾಳ್, ನಡಹಳ್ಳಿ ಸೇರಿ ಬಿಜೆಪಿ ಸದಸ್ಯರು, ರಾಜಕೀಯಕ್ಕಾಗಿ ಯಾವುದೇ ಸಮಾಜವನ್ನು ಒಡೆಯುವುದು ಸರಿಯಲ್ಲ. ಈ ಹಿಂದಿನ ಸರಕಾರ ಸಮಾಜ ಒಡೆಯಲು ಮುಂದಾಗಿದ್ದರಿಂದ ಸೋಲಾಗಿದೆ. ಆ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಶಿವಕುಮಾರ್ ಮೇಲೆ ಮುಗಿಬಿದ್ದರು.
ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಸ್ಪೀಕರ್, ಒಡೆದವರು ಮತ್ತು ಒಂದು ಮಾಡಿದವರನ್ನೆಲ್ಲ ನೋಡಿದ್ದೇವೆ. ಇದೇನು ಕುಸ್ತಿ ಅಖಾಡವೇ. ಪರಸ್ಪರ ಹೆದರಿಸಲು ಮುಂದಾಗುವುದು ಬೇಡ ಎಂದು ಎಲ್ಲರನ್ನು ಕೂರಿಸಿದರು.







