ಮೂಡಿಗೆರೆ: ಸಾಲ ಮರುಪಾವತಿಗೆ ಎಸ್‍ಬಿಐ ಬ್ಯಾಂಕ್ ನೋಟಿಸ್; ರೈತರಲ್ಲಿ ಆತಂಕ

ಚಿಕ್ಕಮಗಳೂರು, ಜು.4: ರಾಷ್ಟೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಸರಕಾರ ಬದ್ಧವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ ಮೂಡಿಗೆರೆ ಪಟ್ಟಣದ ಕೆಲ ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ಸಾಲ ಮರುಪಾವತಿಸಿ, ಇಲ್ಲವೇ ಕಾನೂನು ಕ್ರಮ ಎದುರಿಸಿ ಎಂಬ ಸಾರಾಂಶದ ನೋಟಿಸ್‍ಗಳನ್ನು ಜಾರಿ ಮಾಡುವ ಮೂಲಕ ತಾಲೂಕಿನ ರೈತರನ್ನು ಗೊಂದಲಕ್ಕೀಡು ಮಾಡುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲಿರುವ ಎಸ್‍ಬಿಐ ಬ್ಯಾಂಕ್ ಕಳೆದ ಜೂನ್ ತಿಂಗಳಿನಿಂದ ತಾಲೂಕಿನ ನೂರಾರು ರೈತರಿಗೆ ಸಾಲ ಮರು ಪಾವತಿ ಮಾಡುವಂತೆ ಕೋರಿರುವ ನೋಟಿಸ್ ಗಳನ್ನು ಜಾರಿ ಮಾಡಿದ್ದು, ಸಾಲ ಪಡೆದ ರೈತರು ಮೂಡಿಗೆರೆ ಎಸ್‍ಬಿಐ ಬ್ಯಾಂಕ್ ಶಾಖೆಯಿಂದ ನೋಟಿಸ್ ಪಡೆದ ನಂತರ ಐದು ದಿನಗಳೊಳಗೆ ಬ್ಯಾಂಕ್ ಅಧಿಕಾರಿಗಳಿನ್ನು ಸಂಪರ್ಕಿಸಿ ಸಾಲ ಮರುಪಾವತಿಸಿ ಸಾಲ ನವೀಕರಿಸಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ನೋಟಿಸ್‍ನಲ್ಲಿ ರೈತರಿಗೆ ಎಚ್ಚರಿಕೆ ನೀಡಲಾಗಿದೆ.
ಆದರೆ ತಾಲೂಕಿನ ನೂರಾರು ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಆಗಲಿದೆ ಎಂಬ ಸಮ್ಮಿಶ್ರ ಸರಕಾರದ ಭರವಸೆಯ ಆಧಾರದ ಮೇಲೆ ತಾವು ಮಾಡಿದ ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದು, ಎಸ್‍ಬಿಐ ಸದ್ಯ ದಿಢೀರನೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿರುವುದರಿಂದ ಗೊಂದಲಕ್ಕೊಳಗಾಗಿದ್ದಾರೆ. ಅಲ್ಲದೇ ಗುರುವಾರ ಸಮ್ಮಿಶ್ರ ಸರಕಾರದ ಬಜೆಟ್ ಮಂಡನೆಯಾಗಲಿದ್ದು, ಬಜೆಟ್‍ನಲ್ಲಿ ಸಾಲ ಮನ್ನಾ ಯೋಜನೆ ಜಾರಿಯಾಗಬಹುದೆಂಬ ವಿಶ್ವಾಸ ರೈತರಲ್ಲಿದೆ. ಆದರೆ ನೋಟಿಸ್‍ಗೆ ಹೆದರಿ ಸಾಲ ಮರುಪಾವತಿಸಿದಲ್ಲಿ ಸಾಲ ಮನ್ನಾ ಯೋಜನೆಯ ಲಾಭ ರೈತರಿಗೆ ಧಕ್ಕದಂತಾಗುತ್ತದೆ ಎಂಬ ಆತಂಕ ಇಲ್ಲಿನ ರೈತರಲ್ಲಿ ಮನೆ ಮಾಡಿದೆ.
ಬ್ಯಾಂಕ್ ಅಧಿಕಾರಿಗಳು ಬಜೆಟ್ ಮಂಡನೆ ವಿಷಯ ತಿಳಿದಿದ್ದರೂ ತಾಲೂಕಿನಾದ್ಯಂತ ನೂರಾರು ರೈತರಿಗೆ ನೋಟಿಸ್ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಒಂದೆಡೆ ರಾಜ್ಯ ಸರಕಾರ ಸಾಲ ಮನ್ನಾ ಯೋಜನೆ ಶೀಘ್ರ ಜಾರಿಯಾಗಲಿದೆ ಎಂದು ಹೇಳಿಕೆ ನೀಡುತ್ತಿದೆ. ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸಿ, ಇಲ್ಲವೇ ಕಾನೂನು ಕ್ರಮ ಎದುರಿಸಿ ಎಂದು ನೋಟಿಸ್ ನೀಡುತ್ತಿದೆ. ಈ ದ್ವಂಧ್ವ ನೀತಿಯಿಂದಾಗಿ ಸಾವಿರಾರು ರೈತರು ಆತಂಕಕ್ಕೊಳಗಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹೀಗೆ ನೋಟಿಸ್ ಜಾರಿ ಮಾಡುವುದನ್ನು ನಿಲ್ಲಿಸಿ, ರೈತರ ಆತಂಕವನ್ನು ದೂರ ಮಾಡಬೇಕೆಂದು ತಾಲೂಕಿನ ರೈತ ಮುಖಂಡರು ಮನವಿ ಮಾಡಿದ್ದಾರೆ.







