ಯಕ್ಷ ಕಲಾವಿದ ಶಿವರಾಮ ಜೋಗಿಗೆ ‘ರಾಮದಾಸ ಸಾಮಗ’ ಪ್ರಶಸ್ತಿ

ಉಡುಪಿ, ಜು. 4: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ತುಳುಕೂಟದ ವತಿಯಿಂದ ಮಲ್ಪೆರಾಮದಾಸ ಸಾಮಗ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ತುಳು ಯಕ್ಷಗಾನ ಕಾರ್ಯಕ್ರಮ ಜು.7ರ ಶನಿವಾರ ಸಂಜೆ 6:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಇವರನ್ನು ಈ ಸಲದ ಮಲ್ಪೆರಾಮದಾಸ ಸಾಮಗ ಪ್ರಶಸ್ತಿ ಹಾಗೂ 10,000 ರೂ. ನಗದು ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಣೇಶ ಕೊಲೆಕಾಡಿ ರಚಿಸಿದ ‘ಗೇಲ್ದಬೀರೆ ವಾಲಿ’ ಎಂಬ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಉದ್ಯಮಿ ವಿಶ್ವನಾಥ ಶೆಣೈ ಭಾಗವಹಿಸಲಿರುವರು ಎಂದು ತುಳುಕೂಟದ ಪ್ರಕಟಣೆ ತಿಳಿಸಿದೆ.
ಸುಮಾರು ಆರು ದಶಕಗಳಿಂದ ಕರಾವಳಿಯ ವಿವಿಧ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವ 77ರ ಹರೆಯದ ಶಿವರಾಮ ಜೋಗಿ ಅವರು ಮೂಲತ: ಬಂಟ್ವಾಳದವರು. ಹಿರಿಯ ಕಲಾವಿದರಾದ ಶೇಣಿ, ವಿಟ್ಲ ಜೋಷಿ ಕುಡಾಣ ಗೋಪಾಲಕೃಷ್ಣ ಭಟ್‌ರ ಕುಣಿತ, ಅರ್ಥಗಾರಿಕೆ ನೋಡಿ ಯಕ್ಷಗಾನವನ್ನು ಕಲಿತ ಇವರು ನಾಲ್ಕು ದಶಕಗಳನ್ನು ಸುರತ್ಕಲ್ ಮೇಳ ವೊಂದರಲ್ಲೇ ಕಳೆದಿದ್ದಾರೆ. ರಾವಣ, ಕರ್ಣ, ದುಶ್ಯಂತ, ಕೋಟಿ ಇವರಿಗೆ ಹೆಸರು ತಂದುಕೊಟ್ಟ ಪಾತ್ರಗಳು.







