ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸಬೇಕು: ಶಾಸಕ ಬಿ.ಶ್ರೀರಾಮುಲು

ಬೆಂಗಳೂರು, ಜು. 4: ಕೇಂದ್ರ ಸರಕಾರದ ಮಾದರಿಯಲ್ಲೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರಕಾರವು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಿರಿಯ ಸದಸ್ಯ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಕೇಂದ್ರ ಸರಕಾರ 7.5ರಷ್ಟು ಮೀಸಲಾತಿ ನೀಡುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರಕಾರವೂ ನಮ್ಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಕೋರಿದರು.
ಇಸ್ರೇಲ್ ಬಿಡಿ: ದೂರದ ಇಸ್ರೇಲ್ ಮಾದರಿ ಕೃಷಿಯನ್ನು ಬಿಟ್ಟು, ನಮ್ಮ ರಾಜ್ಯದಲ್ಲೆ ಇರುವ ಭಾರತೀಯ ವಿಜ್ಞಾನ ಸಂಸ್ಥೆ, ಕೃಷಿ ವಿವಿಗಳ ಸಂಶೋಧನೆಗಳನ್ನು ಅಳವಡಿಸಿಕೊಳ್ಳಲು ಸರಕಾರ ಮುಂದಾಗಬೇಕೆಂದು ಬಿಜೆಪಿ ಸದಸ್ಯ ಕುಮಾರ ಬಂಗಾರಪ್ಪ ಆಗ್ರಹಿಸಿದರು.
ನಮ್ಮ ಜೀವ-ಜಲದ ಮೂಲವೇ ಆಗಿದ್ದ ಕೆರೆಗಳ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಆ ಕೆರೆಗಳನ್ನು ನಮ್ಮ ನೀರಿನ ಶೇಖರಣೆ ದೃಷ್ಟಿಯಿಂದ ಉಳಿಸಿಕೊಳ್ಳಲು ಸರಕಾರ ಆಲೋಚಿಸಬೇಕು ಎಂದ ಅವರು, ಕೆರೆಗಳನ್ನು ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಗರ್‌ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕು. ಅಲ್ಲದೆ, ಅನಧಿಕೃತವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಸಿಓಡಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
‘ಸಾಲಮನ್ನಾ ರೈತರಿಗೆ ಶಾಶ್ವತ ಪರಿಹಾರವಲ್ಲ. ಸಾಲ ಮರುಪಾವತಿ ಮಾಡುವ ದೃಷ್ಟಿಯಿಂದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ. ಕ್ರಿಮಿನಾಶಕ-ಬೀಜವನ್ನು ಕಡಿಮೆ ಬೆಲೆಗೆ ಕೊಡಿ. ಅದನ್ನು ಬಿಟ್ಟು ಸಾಲ ಮನ್ನಾ ಮಾಡುತ್ತಾ ಹೋದರೆ ಇದಕ್ಕೆ ಕೊನೆ ಮೊದಲಿದೆಯೇ?’
-ಕೆ.ಆರ್.ರಮೇಶ್‌ಕುಮಾರ್ ಸ್ಪೀಕರ್







