ಕೃಷಿ ವಿವಿ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಜಿ.ಟಿ.ದೇವೇಗೌಡ

ಬೆಂಗಳೂರು, ಜು. 4: ಬೆಂಗಳೂರು, ಧಾರವಾಡ, ರಾಯಚೂರು ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆದಷ್ಟು ಬೇಗ ಸರಕಾರದ ತೀರ್ಮಾನ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಉನ್ನತ ಶಿಕ್ಷಣ ಮತ್ತು ಕೃಷಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ನಾನು ಮತ್ತು ಕೃಷಿ ಸಚಿವರು ಈ ವಿಷಯ ಕುರಿತಂತೆ ಚರ್ಚೆ ನಡೆಸುತ್ತೇವೆ ಎಂದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಗತ್ಯವಿದ್ದಲ್ಲಿ ತಿದ್ದುಪಡಿ ತಂದು ಕೃಷಿ ಇಲಾಖೆಯೇ ಸಂಪೂರ್ಣವಾಗಿ ನಿರ್ವಹಿಸುವಂತೆ ಮಾಡುವ ಮೂಲಕ ಶಾಶ್ವತವಾಗಿ ಪರಿಹಾರ ದೊರಕಿಸಿ ಕೊಡುವುದಾಗಿ ತಿಳಿಸಿದರು.
ಇದಕ್ಕೆ ದನಿಗೂಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ವಿದ್ಯಾರ್ಥಿಗಳ ಸಮಸ್ಯೆ ಎರಡು ಇಲಾಖೆಗಳಿಗೆ ಸೇರುತ್ತದೆ. ಈ ಸಂಬಂಧ ಬುಧವಾರ ಅಥವಾ ಗುರುವಾರ ಸರಕಾರದಿಂದ ಉತ್ತರ ಕೊಡಿಸಲಾಗುವುದು ಎಂದರು.
2012ರಲ್ಲಿ ಉನ್ನತ ಶಿಕ್ಷಣ ಸಚಿವಾಲಯವೇ ಈ ಸಂಬಂಧ ಕಾನೂನು ರೂಪಿಸಿತ್ತು. ಮುಂದೆ ನ್ಯಾಯಾಲಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಸ್ಯೆ ಎದುರಾಗದಂತೆ ಸರಕಾರದ ತೀರ್ಮಾನವನ್ನು ಈ ಸದನದಲ್ಲಿ ಪ್ರಕಟಿಸಿ, ಕೃಷಿ ವಿದ್ಯಾರ್ಥಿಗಳ ಹಿತಕಾಯಲಾಗುವುದು ಎಂದು ಹೇಳಿದರು.
ನಿಯಮ 330 ಎ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎನ್. ರವಿಕುಮಾರ್, ಬೆಂಗಳೂರು, ಧಾರವಾಡ, ರಾಯಚೂರು ಸೇರಿದಂತೆ ಹಲವು ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಕಳೆದ 20 ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ ಎಂದು ಸರಕಾರದ ಗಮನಕ್ಕೆ ತಂದರು.
ಖಾಸಗಿ ಕೃಷಿ ಕಾಲೇಜುಗಳಲ್ಲಿ ದುಬಾರಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಇದು ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ 10 ಪಟ್ಟು ಹೆಚ್ಚಳವಾಗಿದೆ. ರೈತ ಕುಟುಂಬದಿಂದ ಬಂದಿರುವ ಶೇ. 40 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬೇಕೆಂಬ ಸರಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸರಕಾರದ ಸ್ಪಷ್ಟ ನಿರ್ದೇಶನವಿದ್ದರೂ ಖಾಸಗಿ ಕೃಷಿ ವಿಶ್ವವಿದ್ಯಾಲಯಗಳು ಈ ಆದೇಶವನ್ನು ಉಲ್ಲಂಘಿಸಿವೆ. ಹೀಗಾಗಿ, ಸರಕಾರ ಕೃಷಿ ವಿದ್ಯಾರ್ಥಿಗಳ ಹಿತಕಾಯಬೇಕು ಎಂದು ಒತ್ತಾಯಿಸಿದರು.







