ನ್ಯಾಯಾಂಗ ವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ಬೆಂಗಳೂರು, ಜು.4: ಅರುಣ್ ಶೌರಿ ಬರೆದಿರುವ ‘ಅನಿತಾ ಗೆಟ್ಸ್ ಬೇಲ್’ ಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ರೀತಿ ಆದೇಶಗಳು ಹೊರ ಬರುತ್ತವೆ ಎಂಬುದನ್ನು ಉಲ್ಲೇಖಿಸಲಾಗಿದೆ. ನ್ಯಾಯಾಂಗದ ಬಗ್ಗೆ ನಾವು ಬಹಿರಂಗವಾಗಿ ಮಾತನಾಡುವಂತಿಲ್ಲ. ಸದನದಲ್ಲಿ ಮಾತ್ರ ನಮಗೆ ರಕ್ಷಣೆ ಸಿಗುತ್ತದೆ ಎಂದು ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ನೀಡಿದ ಹೇಳಿಕೆಯು ವಿಧಾನಸಭೆಯಲ್ಲಿ ಕೆಲಕಾಲ ಕಾವೇರಿದ ಚರ್ಚೆಗೆ ಕಾರಣವಾಯಿತು.
ಬುಧವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ರಾಜಕಾರಣಿಗಳನ್ನು ಅತ್ಯಾಚಾರಿಗಳು, ಭ್ರಷ್ಟಾಚಾರಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ. ನ್ಯಾಯಾಧೀಶರು ನಮ್ಮ ಜೊತೆ ವೇದಿಕೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ ಎಂದರು.
ಬಿಜೆಪಿ ಸದಸ್ಯ ಪಿ.ರಾಜೀವ್ ಮಾತನಾಡಿ, ರಾಜ್ಯಪಾಲರ ವಿವೇಚನಾಧಿಕಾರವನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಆದರೆ, ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ ನ್ಯಾಯಾಂಗವು ಶಾಸಕಾಂಗದ ಮೇಲೆ ಸವಾರಿ ಮಾಡಲು ಹೊರಟಿದಂತಿದೆ. ನ್ಯಾಯಾಂಗದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ಸುಪ್ರೀಂಕೋರ್ಟ್ ಇಷ್ಟೇ ದಿನಗಳಲ್ಲಿ ಬಹುಮತ ಸಾಬೀತುಪಡಿಸಿ, ಇಂತಹ ದಿನವೇ ಅಧಿವೇಶನ ಕರೆಯಿರಿ ಎಂದು ಸೂಚನೆ ನೀಡುತ್ತದೆ. ನಾವೇನು ಅವರ ಖೈದಿಗಳೇ ಅಥವಾ ಫಿರ್ಯಾದುದಾರರೇ? ನ್ಯಾಯಾಂಗದಲ್ಲಿರುವವರು ಆಕಾಶದಿಂದ ಬಂದಿದ್ದಾರೆಯೇ? ಜನರು ನೀಡಿರುವ ಶಕ್ತಿಯಿಂದ ರಚನೆಯಾಗಿರುವ ಶಾಸಕಾಂಗದ ಮೇಲೆ ಸವಾರಿ ಮಾಡಲು ಇವರಿಗೆ ಅವಕಾಶ ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಆಸ್ಪತ್ರೆಗಳು, ತಾಲೂಕು ಕಚೇರಿಗಳಿಗೆ ನ್ಯಾಯಾಧೀಶರು ಭೇಟಿ ನೀಡುತ್ತಾರೆ. ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡುತ್ತಾರೆ. ಶಾಸಕಾಂಗದ ಪರಿಧಿಯೊಳಗೆ ಪ್ರವೇಶಿಸಿ ಪ್ರಶ್ನಿಸುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ಒಂದು ಕೆಲಸ ಮಾಡಿ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ನೀಡಿರುವ ಅರೆ ನ್ಯಾಯಿಕ ಅಧಿಕಾರವನ್ನು ಹಿಂಪಡೆದು ಇವರಿಗೆ(ನ್ಯಾಯಾಧೀಶರಿಗೆ) ಎಲ್ಲ ಅಧಿಕಾರಗಳನ್ನು ಕೊಟ್ಟು ಬಿಡಿ ಎಂದು ಸರಕಾರದ ವಿರುದ್ಧ ಅವರು ಕಿಡಿಗಾರಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ಸರಕಾರದ ಜಿ ಕೆಟಗರಿಯಲ್ಲಿ ನಾವು ನಿವೇಶನ ಪಡೆಯಬೇಕಾದರೆ, ನಮಗೆ ಎಲ್ಲಿಯೂ ಮನೆ, ನಿವೇಶನ ಇಲ್ಲ ಎಂದು ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರೆ ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವುದನ್ನು ಪ್ರಶ್ನಿಸುವುದು ಯಾರು ಎಂದರು.
ನ್ಯಾಯಾಂಗ ಇಲಾಖೆಯ ನೌಕರರ ಸಂಘದವರು ನಿರ್ಮಿಸಿರುವ ಬಡಾವಣೆಯಲ್ಲಿ ಸುಳ್ಳು ಪ್ರಮಾಣಪತ್ರಗಳನ್ನು ನೀಡಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ 84 ಜನ ನ್ಯಾಯಾಧೀಶರು ಕಾನೂನು ಬಾಹಿರವಾಗಿ 100/120 ವಿಸ್ತೀರ್ಣದ ನಿವೇಶನ ಪಡೆದಿದ್ದಾರೆ. ನಮ್ಮ ಪ್ರಮಾಣಪತ್ರಗಳನ್ನು ಪರಿಶೀಲನೆ ನಡೆಸುವ ಯಾವ ನೈತಿಕತೆ ಇವರಿಗಿದೆ ಎಂದು ರಾಮಸ್ವಾಮಿ ಕೇಳಿದರು.
ಹುಬ್ಬಳ್ಳಿ-ಧಾರವಾಡದಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಆ ಸಂಕೀರ್ಣ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕೆ, ಬೇಡವೇ ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ ಎಂದು ಅವರು ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳನ್ನು ಆಹ್ವಾನಿಸಿದರೆ ನಾವು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ನ್ಯಾಯಾಧೀಶರು ಹೇಳುತ್ತಾರೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾಗಿರುವ ಈ ಕಟ್ಟಡವನ್ನು ಇಲಾಖೆ ವತಿಯಿಂದಲೇ ಉದ್ಘಾಟಿಸಿ, ಆನಂತರ ಅವರಿಗೆ ಹಸ್ತಾಂತರ ಮಾಡುವುದು ಉತ್ತಮ ಎಂದು ಅವರು ಸಲಹೆ ನೀಡಿದರು. ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು.







