ಸಿರಿವಂತಿಕೆಗಿಂತ ಸಂಸ್ಕಾರವಂತರಾಗಿ ಬಾಳುವುದು ಅವಶ್ಯ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ

ಬೆಂಗಳೂರು, ಜು. 4: ಒಂದು ಧರ್ಮದ ವಿಚಾರ, ಸಿದ್ಧಾಂತಕ್ಕೆ ಕಟ್ಟು ಬೀಳದೆ, ಇನ್ನಿತರೆ ಧರ್ಮಗಳ ಗ್ರಂಥಗಳನ್ನು ಓದಿಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು ಎಂದು ಪದ್ಮಶ್ರೀ ಪುರಸ್ಕೃತ, ಸೂಫಿಸಂತ ಇಬ್ರಾಹಿಂ ಎನ್.ಸುತಾರ ಇಂದಿಲ್ಲಿ ಅಭಿಪ್ರಾಯಪಟ್ಟರು.
ಬುಧವಾರ ನಗರದ ಶಿವಾಜಿನಗರದಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪವಿತ್ರ ಖುರಾನ್ ಓದುವವರು, ಒಮ್ಮೆ ಶರಣರ ವಚನಗಳನ್ನು ಓದಬೇಕು. ಅದೇ ರೀತಿ, ಉಪನಿಷತ್ತು, ವಚನ ಪಠಿಸುವವರು, ಖುರಾನ್ ಓದಿಕೊಳ್ಳಬೇಕು. ಇದರಲ್ಲಿ, ಏಕ ದೇವನ ಬಗ್ಗೆಯೇ ಹೇಳಲಾಗಿದೆ ಎಂದರು.
ಒಬ್ಬರು ಮತ್ತೊಬ್ಬರ ಧರ್ಮವನ್ನು ಗೌರವಿಸುವುದು ನಿಜವಾದ ಭಾವೈಕ್ಯತೆ ಎಂದ ಅವರು, ಮನುಷ್ಯ ಗಳಿಸುವ ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತಿಗೆ ಹೆಚ್ಚಿನ ಮಹತ್ವವಿದ್ದು, ಇಂದು ಸಿರಿವಂತರಾಗುವುದಕ್ಕಿಂತ ಸಂಸ್ಕಾರಯುತ ಮನುಷ್ಯರಾಗಿ ಬಾಳುವುದು ಅತಿ ಅವಶ್ಯವಾಗಿದೆ. ನಮ್ಮ ನಡೆ-ನುಡಿ, ಆಚಾರ-ವಿಚಾರ, ಪದ್ಧತಿಗಳು ಇತರರಿಗೆ ಮಾದರಿಯಾಗಿರಬೇಕೆ ಹೊರತು ಮಾರಕವಾಗಬಾರದು ಎಂದರು.
ಭಾವನೆ ಇಲ್ಲದ ವಸ್ತು ಜಡತ್ವ, ಭಾವನೆ ಇದ್ದವನೇ ನಿಜವಾದ ಮನುಷ್ಯ. ಒಬ್ಬ ಕವಿಗೆ ಒಂದೇ ರಾತ್ರಿಯಲ್ಲಿ ಭಾವಗೀತೆ ರಚಿಸಲು ಆಗಲಿಲ್ಲ. ಆದರೆ ಬೆಳಗ್ಗೆ ತನ್ನ ಮನೆಯಿಂದ ಹೊರ ಬಂದಾಗ ಪಕ್ಷಿಗಳು ಭಾವಗೀತೆ ಬರೆದು ಹಾಡುತ್ತಿದ್ದವು ಎಂದು ಮಾರ್ಮಿಕವಾಗಿ ಭಾವಗೀತೆ ಹುಟ್ಟನ್ನು ವರ್ಣಿಸಿದ ಅವರು, ಭಾವಗೀತೆ ರಚಿಸಲು ಪದವಿ ಬೇಕು ಎಂದು ಎಲ್ಲೂ ಹೇಳಿಲ್ಲ. ಯಾರು ಬೇಕಾದರೂ ಭಾವಗೀತೆ ರಚಿಸಬಹುದು ಎಂದು ನುಡಿದರು.







