ಮೂಲರಪಟ್ನ: ವಾಹನ ಸಂಚಾರ ನಿಷೇಧ
ಮಂಗಳೂರು, ಜು.4: ಎಡಪದವು-ಕುಪ್ಪೆಪದವು-ಆರ್ಲ-ಸೊರ್ನಾಡು ಜಿಲ್ಲಾ ಮುಖ್ಯ ರಸ್ತೆಯ ಮೂಲರಪಟ್ನ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಮಂಗಳೂರು ತಾಲೂಕಿನ ಲೋಕೋಪಯೋಗಿ ಇಲಾಖೆಯ ಎಡಪದವು-ಕುಪ್ಪೆಪದವು- ಆರ್ಲ-ಸೊರ್ನಾಡು ಜಿಲ್ಲಾ ಮುಖ್ಯರಸ್ತೆಯ ಸೇತುವೆ ಕುಸಿದು ಬಿದ್ದಿರುವುದರಿಂದ ರಸ್ತೆ ಮೂಲಕ ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿಗೆ ಸಂಪರ್ಕವು ಕಡಿತಗೊಂಡಿದೆ. ವಾಹನ ಸಂಚಾರ ಅಥವಾ ಮಾನವ ಸಂಚಾರ ಅಸಾಧ್ಯವಾದ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪರ್ಯಾಯ ವ್ಯವಸ್ಥೆ:
ಗುರುಪುರದಿಂದ ಆರ್ಲ-ಸೊರ್ನಾಡುಗಳಿಗೆ ಹೋಗುವ ವಾಹನಗಳು ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಬಂಗ್ಲೆಗುಡ್ಡೆ (ಗುರುಪುರ-ಕೈಕಂಬ ಮಧ್ಯೆ) ಎಂಬಲ್ಲಿಂದ ಪೊಳಲಿದ್ವಾರದ ಮೂಲಕ ಪೊಳಲಿ ರಸ್ತೆಯಲ್ಲಿ ಬಡಗಬೆಳ್ಳೂರುವರೆಗೆ ಸಾಗಿ ಸಂಚರಿಸಬೇಕು. ಸೊರ್ನಾಡು ಕಡೆಗೆ ಸಂಚರಿಸುವುದು.
ಗುರುಪುರದಿಂದ ಬಿ.ಸಿ.ರೋಡ್ ರಸ್ತೆಯಲ್ಲಿ ಹೋಗುವ ವಾಹನಗಳು ಮಂಗಳೂರು ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ನಂ.169ರ ಬಂಗ್ಲೆಗುಡ್ಡೆ (ಗುರುಪುರ-ಕೈಕಂಬ ಮಧ್ಯೆ) ಎಂಬಲ್ಲಿಂದ ಪೊಳಲಿದ್ವಾರದ ಮೂಲಕ ಪೊಳಲಿ ರಸ್ತೆಯಲ್ಲಿ ಅಮ್ಮುಂಜೆ ಮೂಲಕ ಬಿ.ಸಿ.ರೋಡ್ ಬಂಟ್ವಾಳ ಕಡೆಗೆ ಸಂಚರಿಸಬಹುದು ಎಂದು ಪ್ರಕಟನೆ ತಿಳಿಸಿದೆ.







