ಕಾರ್ಕಳ ಗ್ರಂಥಾಲಯಕ್ಕೆ ಉಚಿತ ಗ್ರಂಥ, ಕಂಪ್ಯೂಟರ್ ಕೊಡುಗೆ

ಕಾರ್ಕಳ, ಜು.4: ಖ್ಯಾತ ಸಾಹಿತಿ ಹಾಗೂ ಸಂಘಟಕ ಪ್ರೊ.ಎಂ.ರಾಮಚಂದ್ರ ಅವರು ತಮ್ಮ ಸಂಗ್ರಹದಲ್ಲಿದ್ದ ಅಮೂಲ್ಯ ಗ್ರಂಥಗಳನ್ನು ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಾರ್ಕಳ ಶಾಖಾ ಗ್ರಂಥಾಲಯಕ್ಕೆ ದಾನವಾಗಿ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಕಾರ್ಕಳದ ಶ್ರೀವೀರಭದ್ರ ದೇವಸ್ಥಾನದ ಸಭಾಭವನ ದಲ್ಲಿ ಇತ್ತೀಚೆಗೆ ನಡೆಯಿತು. ಇದರೊಂದಿಗೆ ಉಪಯುಕ್ತ ಕಂಪ್ಯೂಟರ್‌ಗಳ ಸಮರ್ಪಣೆಯೂ ನಡೆಯಿತು.
ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಎಂ.ರಾಮಚಂದ್ರ ಕಳೆದ 57 ವರ್ಷಗಳಲ್ಲಿ ತಾವು ಕಾರ್ಕಳದೊಂದಿಗೆ ಹೊಂದಿರುವ ಆತ್ಮೀಯ ಸಂಬಂಧವನ್ನು ನೆನೆದು, ಅನಾರೋಗ್ಯದ ಕಾರಣದಿಂದ ತಮ್ಮ ಸಂಗ್ರಹದಲ್ಲಿರುವ ಅಮೂಲ್ಯ ಗ್ರಂಥ ಗಳನ್ನು ಲೋಕಾರ್ಪಣೆ ಮಾಡುವ ನಿರ್ಧಾರ ತಳೆದ ಕುರಿತು ವಿವರಿಸಿದರು.
ಕಾರ್ಕಳ ಸಾರ್ವಜನಿಕ ಗ್ರಂಥಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸು ತ್ತಿರುವುದನ್ನು ಸ್ವತಹ ಖಚಿತಪಡಿಸಿಕೊಂಡು, ಅಲ್ಲದೇ ಇತರರು ನೀಡಿದ ಸಲಹೆಗೆ ಅನುಸಾರವಾಗಿ ಅಲ್ಲಿಗೆ ತಮ್ಮ ಗ್ರಂಥಗಳನ್ನು ದಾನ ನೀಡುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು. ತಮ್ಮ ಸಂಗ್ರಹದ ಗ್ರಂಥಗಳು ಸದುಪಯೋಗ ವಾಗಲಿ ಎಂದು ಹಾರೈಸಿದರು. ಎಂ.ರಾಮಚಂದ್ರ ಅವರು ಸಾಂಕೇತಿಕವಾಗಿ ಕೆಲವು ಪುಸ್ತಕಗಳನ್ನು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿಗೆ ಹಸ್ತಾಂತರಿಸಿದರು.
ಕಾರ್ಕಳ ಗ್ರಂಥಾಲಯಕ್ಕೆ ಬ್ರೌಸಿಂಗ್ ಸೆಂಟರ್ ಮಾಡಲು ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾರ್ಕಳ ಸಾಹಿತ್ಯ ಸಂಘ ಅಗತ್ಯವಾದ ಗಣಕ ಯಂತ್ರಗಳನ್ನು ಇದೇ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿತು. ಇವುಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಇವರಿಗೆ ಅಧ್ಯಕ್ಷರು ಹಸ್ತಾಂತರಿಸಿದರು. ಜಿಲ್ಲಾ ಗ್ರಂಥಾಲಯದ ವತಿಯಿಂದ ರಾಮಚಂದ್ರರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಮಾತನಾಡಿ, ಎಂ.ರಾಮಚಂದ್ರ ಅವರು ದಾನವಿತ್ತ ಅಮೂಲ್ಯ ಗ್ರಂಥಗಳನ್ನು ಹಾಗೂ ಗಣಕಯಂತ್ರಗಳನ್ನು ಗ್ರಂಥಾಲಯದಲ್ಲಿ ಜತನದಿಂದ ರಕ್ಷಿಸುವ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಸದಾ ತೆರೆದಿಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷೆ ಅನಿತಾ ಆಂಚನ್, ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್.ತುಕಾರಾಮ್ ನಾಯಕ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದ್ಯ ಶುಭದ ರಾವ್ ಉಪಸ್ಥಿತರಿದ್ದರು.
ಕಾರ್ಕಳ ಸಾಹಿತ್ಯ ಸಂಘದ ಹಿರಿಯ ವಾಚಕ ಕೆ.ಪಿ.ಶೆಣೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಪದ್ಮನಾಭ ಗೌಡ ವಂದಿಸಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.







