ಖಾಸಗಿ ಜಾಗದ ಮರ ಕಳವು : ಆರೋಪಿ ಬಂಧನ

ಮೂಡುಬಿದಿರೆ, ಜು. 4 : ಮಾರ್ಪಾಡಿ ಗ್ರಾಮದ ಖಾಸಗಿ ಜಾಗದಲ್ಲಿನ ಮರಗಳನ್ನು ಕಡಿದು ಕಳವುಗೈದು ಮಾರಾಟ ಮಾಡಲು ಯತ್ನಿಸಿದ ಆರೋಪಿಯೋರ್ವನನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿ, ಕಡಿದಿರುವ ಸುಮಾರು 50,000 ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಪಾಡಿ ಗ್ರಾಮದ ಹುಗ್ಗುಗುತ್ತು ನಿವಾಸಿ ನವೀನ್ ಶೆಟ್ಟಿ (52) ಬಂಧಿತ ಆರೋಪಿ.
ಈತ ತನ್ನ ಮನೆ ಸಮೀಪದ ದೇವದಾಸ್ ಶ್ಯಾಮ ಶೆಟ್ಟಿ ಎಂಬವರಿಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶಗೈದು ಮರಗಳನ್ನು ಕಡಿದಿದ್ದು, ಬಳಿಕ ಬಚ್ಚಿಟ್ಟಿದ್ದರೆನ್ನಲಾಗಿದೆ. ಶ್ಯಾಮ ಶೆಟ್ಟಿ ಕುಟುಂಬ ಮುಂಬೈಯಲ್ಲಿ ನೆಲೆಸಿದ್ದು, ಕಳ್ಳತನದ ಬಗ್ಗೆ ಸುದ್ದಿ ತಿಳಿದು ಊರಿಗೆ ಬಂದು ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಪೋಲಿಸರು, ಪ್ರಮುಖ ಸಾಕ್ಷಿಯೋರ್ವನನ್ನು ಕಾಸರಗೋಡು ಸಮೀಪ ಈ ಹಿಂದೆಯೇ ವಶಕ್ಕೆ ಪಡೆದಿದ್ದರು. ಆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ, ಕಡಿದ ಮರಗಳನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ.
Next Story





