ಎಎಂಯುನಲ್ಲಿ ದಲಿತರಿಗೆ ಮೀಸಲಾತಿ ಯಾಕಿಲ್ಲ : ಉ.ಪ್ರ. ಪರಿಶಿಷ್ಟ ಆಯೋಗದಿಂದ ವಿ.ವಿ.ಗೆ ನೋಟಿಸ್

ಲಕ್ನೋ, ಜು. ೪: ಎಎಂಯು ಅಲ್ಪಸಂಖ್ಯಾತ ಸಂಸ್ಥೆ ಅಲ್ಲ ಎಂದು ಪ್ರತಿಪಾದಿಸಿರುವ ಉತ್ತರಪ್ರದೇಶ ಪ. ಜಾ., ಪ. ಪಂ. ಆಯೋಗವು, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಯಾಕೆ ನೀಡುತ್ತಿಲ್ಲ ಎಂಬುದನ್ನು ವಿವರಿಸುವಂತೆ ಸೂಚಿಸಿ ಬುಧವಾರ ವಿಶ್ವವಿದ್ಯಾನಿಲಯಕ್ಕೆ ನೋಟಿಸ್ ಜಾರಿ ಮಾಡಿದೆ.
‘‘ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯವನ್ನು ಯಾಕೆ ನೀಡುತ್ತಿಲ್ಲ ಎಂದು ನಾವು ಪ್ರಶ್ನಿಸುತ್ತಿದ್ದೇವೆ. ಯಾವ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ’’ ಎಂದು ಉತ್ತರಪ್ರದೇಶ ಪ.ಜಾ. ಹಾಗೂ ಪ.ಪಂ. ಆಯೋಗದ ಅಧ್ಯಕ್ಷ ಬ್ರಿಜ್ ಲಾಲ್ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಸ್ಥಾನ ನೀಡುವ ಎಎಂಯು ಕಾಯ್ದೆ ೧೯೮೧ರ ಅಡಿ ವಿಶ್ವವಿದ್ಯಾನಿಲಯದ ಆಡಳಿತ ನಿರ್ವಹಣೆಯಾಗುತ್ತಿದೆ ಹಾಗೂ ಭಾರತದ ಸಂವಿಧಾನ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಮೀಸಲಾತಿಗೆ ವಿನಾಯಿತಿ ನೀಡುತ್ತದೆ ಎಂದು ಎಎಂಯು ಮಂಗಳವಾರ ಸ್ಪಷ್ಟನೆ ನೀಡಿತ್ತು.
ದಿಲ್ಲಿಯಲ್ಲಿರುವ ಎಎಂಯು ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಂತಹ ಅಲ್ಪ ಸಂಖ್ಯಾತರಿಂದ ನಿರ್ವಹಣೆಯಾಗುತ್ತಿರುವ ವಿಶ್ವವಿದ್ಯಾನಿಲಯಗಳಲ್ಲಿ ದಲಿತರಿಗೆ ಮೀಸಲಾತಿ ನೀಡುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಆಗ್ರಹಿಸಿದ ಬಳಿಕ ಈ ಸ್ಪಷ್ಟನೆ ಹೊರಬಿದ್ದಿತ್ತು.







