'ಬಿಎಸ್‌ಪಿ, ಜೆಡಿಎಸ್ ಸಮ್ಮಿಶ್ರ ಸರಕಾರ' ಎಂದ ಸಚಿವರ ಮಾತಿಗೆ ಸದನ ಕಕ್ಕಾಬಿಕ್ಕಿ

ಬೆಂಗಳೂರು, ಜು. 4: ಸಭಾನಾಯಕಿ ಜಯಮಾಲಾ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರನ್ನು ಸದನಕ್ಕೆ ಪರಿಚಯಿಸಿಕೊಟ್ಟ ವೇಳೆ ಸಚಿವರು ಹೇಳಿದ ಮಾತುಗಳಿವು, 'ನಾನು ಮೊದಲ ಸಲ ಶಾಸಕನಾಗಿ ಸಚಿವನಾಗಿದ್ದೇನೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ನಾನೊಬ್ಬನೇ ಬಿಎಸ್‌ಪಿ ಸದಸ್ಯ. ಹೀಗಾಗಿ, ಇದು ಬಿಎಸ್‌ಪಿ ಮತ್ತು ಜೆಡಿಎಸ್‌ನ ಸಮ್ಮಿಶ್ರ ಸರಕಾರ' ಎಂದಾಗ ಎಲ್ಲ ಸದಸ್ಯರು ನಗೆಗಡಲಲ್ಲಿ ತೇಲಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಸಚಿವ ಮಹೇಶ್ ಅವರತ್ತ ನೋಡಿ ಈ ಸದನವಿರುವುದು ನಿಮಗಾಗಿ, ಶಿಕ್ಷಕರಿಗಾಗಿ. ಈ ಸದನದಲ್ಲಿ ಬಹುತೇಕ ಕಳೆಯಬೇಕಾಗುತ್ತದೆ ಎಂದು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿಯವರು ಈ ಸದನದಲ್ಲಿ ಶಿಕ್ಷಕರ ಕ್ಷೇತ್ರದವರೇ ಹೆಚ್ಚು ಸದಸ್ಯರಿರುವುದರಿಂದ ಸಚಿವರ ಪರಿಸ್ಥಿತಿ ಗಂಭೀರವಾಗಿರುತ್ತದೆ ಎಂದು ಮುಂದಿನ ಕಲಾಪಗಳಲ್ಲಿ ಸಚಿವರು ಎದುರಿಸಬಹುದಾದ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಹೇಳಿದರು.
Next Story





