ವಿಶ್ವಕಪ್ ಪ್ರಿ-ಕ್ವಾರ್ಟರ್‌ನ ಶ್ರೇಷ್ಠ 5 ಗೋಲುಗಳು
ಸೋಚಿ, ಜು.4: ಉರುಗ್ವೆ ತಂಡ ಜೂ.30 ರಂದು ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. ಈ ಪಂದ್ಯದಲ್ಲಿ ಎಡಿನ್ಸನ್ ಕವಾನಿ ಅವಳಿ ಗೋಲು ಬಾರಿಸಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು. ಕವಾನಿ ಗಳಿಸಿದ ಗೋಲು ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನ ಶ್ರೇಷ್ಠ ಗೋಲಾಗಿ ಗಮನ ಸೆಳೆದಿದೆ.
►ಎಡಿನ್ಸನ್ ಕವಾನಿ
ಲೂಯಿಸ್ ಸುಯರೆಝ್ ನೀಡಿದ ಪಾಸ್‌ನ ನೆರವಿನಿಂದ ಹೆಡರ್‌ನ ಮೂಲಕ ಏಳನೇ ನಿಮಿಷದಲ್ಲಿ ಗೋಲು ದಾಖಲಿಸಿದ ಕವಾನಿ ಉರುಗ್ವೆಗೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. ಮೈದಾನದ ಮತ್ತೊಂದು ಬದಿಯಲ್ಲಿ ಆಡುತ್ತಿದ್ದ ಕವಾನಿ 30 ಯಾರ್ಡ್ ದೂರದಿಂದ ಪೋರ್ಚುಗಲ್‌ನ ಗೋಲುಪೆಟ್ಟಿಗೆಯತ್ತ ಬಂದರು. ಸುಯರೆಝ್ ನೀಡಿದ ಪಾಸ್‌ನ್ನು ಹೆಡರ್‌ನ ಮೂಲಕ ಗೋಲುಬಲೆಗೆ ಬೀಳಿಸಿ ಮ್ಯಾಜಿಕ್ ಮಾಡಿದರು.
►ಆ್ಯಂಜೆಲ್ ಡಿ ಮಾರಿಯಾ
ಫ್ರಾನ್ಸ್ ವಿರುದ್ಧ ಅರ್ಜೆಂಟೀನ ಆಡಿದ ಮೊದಲ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಂಜೆಲ್ ಡಿ ಮಾರಿಯಾ 30 ಯಾರ್ಡ್ ದೂರದಿಂದ ಕ್ಷಿಪಣಿ ವೇಗದಲ್ಲಿ ಗೋಲು ದಾಖಲಿಸಿ ಅರ್ಜೆಂಟೀನ ತಿರುಗೇಟು ನೀಡಲು ನೆರವಾಗಿದ್ದರು.
►ಬೆಂಜಮಿನ್ ಪಾವರ್ಡ್
ಫ್ರಾನ್ಸ್ ತಂಡ 1-2 ಹಿನ್ನಡೆಯಲ್ಲಿದ್ದಾಗ 22ರ ಹರೆಯದ ಡಿಫೆಂಡರ್ ಬೆಂಜಮಿನ್ ಪಾವರ್ಡ್ ಅದ್ಭುತ ಗೋಲು ದಾಖಲಿಸಿದರು. ಈ ಗೋಲು ಪಂದ್ಯದ ಚಿತ್ರಣವನ್ನು ಬದಲಿಸಿತ್ತು.
►ಕೆಲಿಯನ್ ಬಾಪೆ
ಫ್ರಾನ್ಸ್‌ನ ಯುವ ಆಟಗಾರ ಕೈಲಿಯನ್ ಮಾಪೆ ಅರ್ಜೆಂಟೀನದ ವಿರುದ್ಧ ಅವಳಿ ಗೋಲು ದಾಖಲಿಸಿ ವಿಶ್ವದ ಗಮನ ತನ್ನತ್ತ ಸೆಳೆದಿದ್ದರು. ಬಾಪೆ ಸಾಹಸದಿಂದ ಫ್ರಾನ್ಸ್ ತಂಡ 4-3 ಅಂತರದಿಂದ ಗೆಲುವು ಸಾಧಿಸಿತ್ತು. ಲಿಯೊನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲುವ ಕನಸು ಕಮರಿಹೋಗಿತ್ತು. 19ರ ಹರೆಯದ ಬಾಪೆ 1958ರ ಬಳಿಕ ವಿಶ್ವಕಪ್ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು. 1958ರಲ್ಲಿ ಬ್ರೆಝಿಲ್ ದಂತಕತೆ ಪೀಲೆ ಈ ಸಾಧನೆ ಮಾಡಿದ್ದರು. ಮಾಪೆ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಗಳಿಸಿದ ಕಿರಿಯ ಆಟಗಾರನಾಗಿದ್ದಾರೆ. ಬ್ರೆಝಿಲ್‌ನ ಆರು ಆಟಗಾರರು ಈ ಸಾಧನೆ ಮಾಡಿದ್ದಾರೆ.
►ತಕಹಶಿ ಇನೊಯಿ
ಬೆಲ್ಜಿಯಂ ವಿರುದ್ಧ ಪಂದ್ಯದಲ್ಲಿ ಜಪಾನ್ 1-0 ಮುನ್ನಡೆಯಲ್ಲಿದ್ದಾಗ 52ನೇ ನಿಮಿಷದಲ್ಲಿ ಗೋಲುಬಾಕ್ಸ್‌ನಿಂದ 22 ಯಾರ್ಡ್ ದೂರದಿಂದ ಚೆಂಡು ಸ್ವೀಕರಿಸಿದ ಜಪಾನ್‌ನ ತಕಹಶಿ ಇನೊಯಿ ಬೆಲ್ಜಿಯಂನ ಗೋಲ್‌ಕೀಪರ್ ಥಿಲ್‌ಬೌಟ್ ಕೊರ್ಟೊಯಿಸ್‌ರನ್ನು ವಂಚಿಸಿ ಆಕರ್ಷಕ ಗೋಲು ಹೊಡೆದರು. ಜಪಾನ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದರು.







