ಮುಝಫ್ಫರ್‌ನಗರದ 'ರೊನಾಲ್ಡೊ ಭಾಯ್' ಬಗ್ಗೆ ನಿಮಗೆ ಗೊತ್ತೇ ?

ಮುಝಫ್ಫರ್‌ನಗರ, ಜು. 5: ಪಶ್ಚಿಮ ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಜನಪ್ರಿಯ. ರಷ್ಯಾದಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿರುವುದೂ ಎಷ್ಟೋ ಮಂದಿಗೆ ಗೊತ್ತಿಲ್ಲ. ಆದರೆ ಭೋಪಾದಲ್ಲಿ "ರೊನಾಲ್ಡೊ ಭಾಯ್" ಎಂಬ ಅಡ್ಡಹೆಸರಿನಿಂದ ಕರೆಸಿಕೊಳ್ಳುವ 21 ವರ್ಷದ ನಿಷು ಕುಮಾರ್ ಇಲ್ಲಿನ ಯುವಕರ ಕಣ್ಮಣಿ.
ಫುಟ್‌ಬಾಲ್ ಜಗತ್ತಿನಲ್ಲಿ ಈತನ ಸಾಧನೆ ಅಮೋಘ. ಪ್ರತಿಷ್ಠಿತ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಪರ ಆಡಲು ಒಂದು ಕೋಟಿ ರೂಪಾಯಿಯ ಗುತ್ತಿಗೆ ಪಡೆದುಕೊಂಡಿದ್ದಾನೆ. ಮೊದಲ ವರ್ಷಕ್ಕೆ 40 ಲಕ್ಷ, ಎರಡನೇ ವರ್ಷಕ್ಕೆ 45 ಲಕ್ಷ ಹಾಗೂ 15 ಲಕ್ಷ ರೂಪಾಯಿಯನ್ನು ಪಂದ್ಯದ ಬೋನಸ್ ಆಗಿ ಪಡೆಯಲಿದ್ದಾನೆ.
ಈತನ ತಂದೆ ಜನತಾ ಇಂಟರ್ ಕಾಲೇಜಿನಲ್ಲಿ ಜವಾನ. ಯಾವ ಮೂಲಸೌಕರ್ಯ ಅಥವಾ ಅವಕಾಶ ಇಲ್ಲದಿದ್ದರೂ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಎಲ್ಲರೂ ಹುಬ್ಬೇರಿಸುವಂಥ ವೃತ್ತಿಜೀವನ ರೂಪಿಸಿಕೊಂಡಿದ್ದಾನೆ. ಇಂದು ಈತ ಸ್ಥಳೀಯ ಹುಡುಗರಿಗೆ ಫುಟ್‌ಬಾಲ್ ಕ್ರಿಡೆಯನ್ನು ವೃತ್ತಿಯಾಗಿ ಪರಿಗಣಿಸಲು ಸ್ಫೂರ್ತಿಯಾಗಿದ್ದಾನೆ.
"ನಾವು ಆಡಬಹುದಾದ ಕ್ರೀಡೆಗಳಲ್ಲಿ ಫುಟ್‌ಬಾಲ್ ಅತ್ಯಂತ ಅಗ್ಗದ ಕ್ರೀಡೆ. ಬೇಕಾಗುವುದು ಒಂದು ಚೆಂಡು ಮಾತ್ರ. ಶಾಲಾ ಮೈದಾನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನದಲ್ಲಿ ಆಡುತ್ತಿದ್ದೆವು. ಕ್ರಮೇಣ ಕ್ರೀಡೆ ಬಗ್ಗೆ ಪ್ರೀತಿ ಹೆಚ್ಚಿತು. ಒಂದು ದಿನ ಚಂಡೀಗಢ ಫುಟ್‌ಬಾಲ್ ಕ್ಲಬ್‌ನಲ್ಲಿ ಟ್ರಯಲ್ಸ್ ನೀಡಲು ಅರ್ಹತೆ ಪಡೆದೆ" ಎಂದು ನಿಶು ತನ್ನ ಯಶೋಗಾಥೆ ವಿವರಿಸುತ್ತಾರೆ.
ತಾನು ಓದುತ್ತಿದ್ದ ಕಾಲೇಜಿನಲ್ಲೇ ಜವಾನನಾಗಿದ್ದ ತಂದೆ ಕೆಲ ವಾರಗಳ ಹಿಂದೆ ತೀರಿಕೊಂಡರು. "ನಿಶು ನಮ್ಮ ಕ್ಲಬ್‌ಗೆ ಆಸ್ತಿ. ಮೂರು ವರ್ಷಗಳ ಹಿಂದಷ್ಟೇ ಕ್ಲಬ್‌ಗೆ ಬಂದ ಈತ ಲೆಫ್ಟ್ ಬ್ಯಾಕ್ ಆಟಗಾರನಾಗಿ ಗಮನ ಸೆಳೆಯುತ್ತಿದ್ದಾನೆ. ಈ ಗುತ್ತಿಗೆಗೆ ಅರ್ಹ. ಆತ ಕ್ರಮಿಸಬೇಕಾದ ಹಾದಿ ಸುಧೀರ್ಘವಾಗಿದೆ" ಎಂದು ಬಿಎಫ್‌ಸಿ ಮಾಧ್ಯಮ ವ್ಯವಸ್ಥಾಪಕ ಕುನಾಲ್ ಮಡಗಾಂವ್‌ಕರ್ ಹೇಳುತ್ತಾರೆ.
ಊರಿಗೆ ಮರಳಿದಾಗ ಮಕ್ಕಳು ಹಾಗೂ ಯುವಕರು ಈತನನ್ನು 'ರೊನಾಲ್ಡೊ ಭಾಯ್' ಎಂದೇ ಕರೆಯುತ್ತಾರೆ ಹಾಗೂ ಈತನ ಬರುವಿಕೆಗಾಗಿ ಕಾಯುತ್ತಾರೆ. "ನಿಶು ನಮಗೆ ನಿರಂತರ ಸ್ಫೂರ್ತಿಯ ಚಿಲುಮೆ. ಸೌಲಭ್ಯಗಳ ಕೊರತೆ ಎಂದು ನಾವು ಕೊರಗುತ್ತಾ ಕುಳಿತರೆ ನಮಗೇ ನಷ್ಟ. ಅದರಲ್ಲೇ ನಾವು ಸಾಧಿಸಬೇಕು ಎಂದು ನಮಗೆ ಸ್ಫೂರ್ತಿ ತುಂಬುತ್ತಾರೆ" ಎಂದು ಗೌರವ್ ಸಿಂಗ್ ಎಂಬ ಹದಿಹರೆಯದ ಯುವಕ ಹೇಳುತ್ತಾನೆ.
ಈ ಅದ್ಭುತ ಆಟಗಾರನ ಬಗ್ಗೆ ಮೊದಲ ಕೋಚ್ ಹಾಗೂ ಜನತಾ ಕಾಲೇಜಿನ ಕ್ರೀಡಾ ಶಿಕ್ಷಕ ಕುಲದೀಪ್ ರಾಠಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಗಲು ರಾತ್ರಿ ಆತ ಮಾಡಿದ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಅವರು ಹೇಳುತ್ತಾರೆ. ಫುಟ್‌ಬಾಲ್ ಎನ್ನುವ ಹೆಸರನ್ನೇ ಕೇಳದ, ಒಂದು ಫುಟ್‌ಬಾಲ್ ಕ್ರೀಡಾಂಗಣವೂ ಇಲ್ಲದ ಈ ಭಾಗದಲ್ಲಿ ಇಂಥ ಆಟಗಾರ ರೂಪುಗೊಂಡಿರುವುದು ನಿಜಕ್ಕೂ ಅಚ್ಚರಿ ಎಂದು ಹೇಳುತ್ತಾರೆ.







